ಉಡುಪಿ: 'ಬೆಲೆ ಏರಿಕೆ ಬಗ್ಗೆ ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ' - ರಮೇಶ್ ಕಾಂಚನ್


ಉಬಡುಪಿ : ಬೆಲೆ ಏರಿಸಿ ಜನರ ಬದುಕು ದುಸ್ತರವಾಗಲು ಕಾರಣವಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ರಾಜ್ಯ ಬಿಜೆಪಿಯವರು ಮೊದಲು ಸರಿಯಾಗಿ ತರಾಟೆಗೆ ತೆಗೆದುಕೊಳ್ಳಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ಗಗನಕ್ಕೇರಿದ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಇಳಿಸದೆ ಜನರನ್ನು ವಂಚಿಸುತ್ತಿದ್ದೆ‌. ಇಂಧನಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಹಲವಾರು ವಸ್ತುಗಳ ಬೆಲೆ ಏರಿಕೆಯಾಗಿದೆ.

ಗ್ಯಾಸ್ ಸಿಲಿಂಡರ್ ದರ ಹೆಚ್ಚಳ,ಟೋಲ್ ದರ ಏರಿಕೆ, ಆರೋಗ್ಯ ವಿಮೆ ಮೇಲೆ ಶೇಕಡಾ 18 ಜಿ.ಎಸ್.ಟಿ, ಜೀವವಿಮೆಯ ಮೇಲೂ ಜಿ.ಎಸ್.ಟಿ ಹೇರಿಕೆ,ಅಗತ್ಯದ ಔಷಧಿ, ಬ್ಯಾಂಕ್ ಸೇವಾ ಶುಲ್ಕ, ತರಕಾರಿ ಬೇಳೆಕಾಳುಗಳು ಹಾಗೂ ಅಡುಗೆಗೆ ಸಂಬಂಧಿಸಿದ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನರು ಕಂಗಾಲಾಗಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಳಪೆ ಅರ್ಥಿಕ ನೀತಿಯಿಂದಾಗಿ ಹಣದುಬ್ಬರವೂ ಗಣನೀಯವಾಗಿ ಏರಿಕೆಯಾಗಿದೆ. ರಾಜ್ಯಕ್ಕೆ ನೀಡುವ ತೆರಿಗೆ ಪಾಲಿನ ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಅನ್ಯಾಯವೆಸುಗುತ್ತಿದ್ದೆ.

ಈ ಹಿಂದೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಇದ್ದ ಸಂದರ್ಭದಲ್ಲಿ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರ ಸಮಸ್ಯೆಯ ಪರಿಹಾರಕ್ಕಾಗಿ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿಗಳನ್ನು ಘೋಷಿಸಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತ ಬಂದ ದಿನದಿಂದ ಇಂದಿನವರೆಗೂ ಆ ಪಂಚ ಗ್ಯಾರಂಟಿಗಳನ್ನು ಯಥಾವತ್ತಾಗಿ ರಾಜ್ಯದ ಜನರಿಗೆ ನೀಡುವ ಮೂಲಕ ಅವರು ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ.ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿಯವರು ತಮ್ಮ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿ ಎಂಬುದನ್ನು ಅರ್ಥೈಸಿಕೊಂಡು ತಮ್ಮ ಜನಾಕ್ರೋಶ ಯಾತ್ರೆಯನ್ನು ಕೇಂದ್ರ ಸರ್ಕಾರದ ವಿರುದ್ಧವೇ ನಡೆಸುವಂತೆ ರಮೇಶ್ ಕಾಂಚನ್ ಒತ್ತಾಯಿಸಿದ್ದಾರೆ.


ಬ್ರಹ್ಮಾವರ: ಪ್ಲೈಓವರ್ ಬಗ್ಗೆ ತಾಂತ್ರಿಕ ಸಮಿತಿ ವರದಿಯಂತೆ ಕ್ರಮ: ಉಡುಪಿ ಡಿಸಿ ವಿದ್ಯಾಕುಮಾರಿ


ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ಲೈಓವರ್ ಅಥವಾ ಅಂಡರ್ ಪಾಸ್ ನಿರ್ಮಿಸುವ ಕುರಿತು ತಾಂತ್ರಿಕ ಸಮಿತಿ ನೀಡುವ ವರದಿಯಂತೆ ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಶಾಲಾ ವಿದ್ಯಾರ್ಥಿ ಮೃತಪಟ್ಟಿ ರುವುದು ವಿಷಾದದ ಸಂಗತಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರೀತಿಯ ಘಟನೆ ಪದೇ ಪದೇ ಆಗುತ್ತಿದೆ. ಈಗಾಗಲೇ ಈ ಕುರಿತು ಪರಿಶೀಲಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೋಲಿಸ್, ಲೋಕೋಪಯೋಗಿ, ಕಂದಾಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ ಎಂದರು. 

ಫ್ಲೈ ಓವರ್, ಅಂಡರ್ ಪಾಸ್ ರಚನೆಯ ಸಾಧ್ಯತೆ ಕುರಿತು ಈ ಸಮಿತಿ ಪರಿಶೀಲನೆ ನಡೆಸಲಿದ್ದು, ಈ ಸಂಬಂಧ ಎ.7ರೊಳಗೆ ವರದಿ ಬರಲಿದೆ. ಆ ವರದಿಯ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾ ಗುವುದು. ಎ.8ರಂದು ಈ ಸಂಬಂಧ ಸಭೆ ಕರೆದು ಚರ್ಚಿಸಲಾಗುವುದು. ಇದೀಗ ಅಲ್ಲಿ ತಾತ್ಕಾಲಿಕವಾಗಿ ಸರ್ವಿಸ್ ರಸ್ತೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋಡಿ ಕನ್ಯಾಣದಲ್ಲಿ ಶ್ರೀರಾಮ ಗೆಳೆಯರ ಬಳಗದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ


 ಕೋಡಿ ಕನ್ಯಾಣ, ಏಪ್ರಿಲ್ 05: ಶ್ರೀರಾಮ ಗೆಳೆಯರ ಬಳಗ (ರಿ.), ಕೋಡಿ ಕನ್ಯಾಣ ಇವರು ತಮ್ಮ ತೃತೀಯ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದಾರೆ.

ಈ ರಕ್ತದಾನ ಶಿಬಿರವು ನಾಳೆ, ಏಪ್ರಿಲ್ 06 ರ ಭಾನುವಾರ ಬೆಳಿಗ್ಗೆ 8.30 ರಿಂದ ಕೋಡಿ ಕನ್ಯಾಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

"ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ, ಜೀವ ಉಳಿಸಿ" ಎಂಬ ಧ್ಯೇಯವಾಕ್ಯದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸುವಂತೆ ಸಂಘಟಕರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ: +91-9538596072, +91 6363054932, ಮತ್ತು +91-8970635175.


ಭೂಮಾಲಕರ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ: ವಾರದೊಳಗೆ ಆಧಾರ್ ಲಿಂಕ್‌ಗೆ ಉಡುಪಿ ಡಿಸಿ ಸೂಚನೆ


ಉಡುಪಿ: ರೈತರು ತಮ್ಮ ಜಮೀನಿನ ಪಹಣಿಯನ್ನು ಆಧಾರ್‌ಗೆ ಲಿಂಕ್ ಮಾಡುವ ಕಾರ್ಯವು ಪ್ರಗತಿಯಲ್ಲಿದ್ದು, ಜಿಲ್ಲೆಯಲ್ಲಿ ಈವರೆಗೆ ಶೇ. 85ರಷ್ಟು ಮಾತ್ರ ಪ್ರಗತಿಯಾಗಿದೆ. ಮುಂದಿನ ಒಂದು ವಾರದೊಳಗೆ ಜಿಲ್ಲೆಯಲ್ಲಿ ಬಾಕಿ ಇರುವ ಭೂಮಾಲಕರ ಜಮೀನಿನ ಪಹಣಿಯನ್ನು ಆಧಾರ್‌ಗೆ ಲಿಂಕ್ ಮಾಡುವ ಬಗ್ಗೆ ಸರಕಾರದಿಂದ ನಿರ್ದೇಶನ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಪಹಣಿಗೆ ಆಧಾರ ಜೋಡಣೆಯಲ್ಲಿ ಜಿಲ್ಲೆ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಅಕ್ರಮ ಖಾತಾ ಬದಲಾವಣೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಆಧಾರ್ ಜೋಡಣೆ ಅವಶ್ಯಕವಾಗಿದ್ದು, ಜಿಲ್ಲೆಯ ರೈತರು ಮೂರು ದಿನ ದೊಳಗಾಗಿ ಪಹಣಿ ಆಧಾರ್ ದಾಖಲಾತಿಗಳೊಂದಿಗೆ ಹಾಗೂ ಆಧಾರ್ ಜೋಡಣೆಯಾಗಿರುವ ಮೊಬೈಲ್‌ ನೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿ ಅವರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಜಮೀನು ಹೊಂದಿ ಬೇರೆ ರಾಜ್ಯ ಅಥವಾ ವಿದೇಶಗಳಲ್ಲಿ ವಾಸವಿರುವ ಭೂಮಾಲಕರು ಸ್ವಗ್ರಾಮಕ್ಕೆ ಬಂದ ಕೂಡಲೇ ಅಥವಾ ಅವರ ಕುಟುಂಬಸ್ಥರು/ಸಂಬಂಧಿಕರು ಜಿಲ್ಲೆಯಲ್ಲಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪಹಣಿಗೆ ಆಧಾರ್ ಜೋಡಣೆ ಮಾಡಿಸ ಬೇಕು. ಈ ಕಾರ್ಯ ಗ್ರಾಮ ಆಡಳಿತ ಅಧಿಕಾರಿಗಳ ಮುಖಾಂತರವೇ ಆಗುತ್ತಿದ್ದು ಯಾವುದೇ ಸೈಬರ್ ಅಥವಾ ಗ್ರಾಮ ಒನ್ ಸೆಂಟರ್ ಇತ್ಯಾದಿ ಕಡೆಗಳಲ್ಲಿ ಮಾಡಲು ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಆದ್ದರಿಂದ, ಈವರೆಗೆ ಆಧಾರ್ ಜೋಡಣೆ ಮಾಡದೇ ಇರುವ ಭೂಮಾಲಕರು ಮುಂದಿನ ದಿನಗಳಲ್ಲಿ ಸರಕಾರದ ಸವಲತ್ತುಗಳಿಂದ ವಂಚಿತರಾಗುವ ಸಂಭವ ಇರುವುದರಿಂದ ಆಧಾರ್ ಜೋಡಣೆ ಮಾಡದೇ ಇರುವ ಭೂಮಾಲಕರು ತಕ್ಷಣವೇ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪಹಣಿಗೆ ಆಧಾರ್ ಜೋಡಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಣಿಪಾಲ: ಬಸ್ ಟೈಮಿಂಗ್ ವಿಚಾರಕ್ಕೆ ಹಲ್ಲೆ ಪ್ರಕರಣ; ವೀಡಿಯೋ ವೈರಲ್ ಬೆನ್ನಲ್ಲೇ ಇಬ್ಬರ ಬಂಧನ

 


ಉಡುಪಿ: ಮಣಿಪಾಲದ ಟೈಗರ್‌ ಸರ್ಕಲ್‌ ಬಳಿ ಇರುವ ಖಾಸಗಿ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸುವ ಟೈಮಿಂಗ್‌ ವಿಚಾರದಲ್ಲಿ ಎರಡು ಬಸ್ಸುಗಳ ಚಾಲಕ ಹಾಗೂ ನಿರ್ವಾಹಕನ ನಡುವೆ ಗಲಾಟೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಎ.2 ರಂದು ಸಂಜೆ ಈ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ತನಿಖೆ ಕೈಗೊಂಡು ಆರೋಪಿಗಳಾದ ಮಂಜುನಾಥ ಬಸ್ಸಿನ ಚಾಲಕ ಮೊಹಮ್ಮದ್‌ ಆಲ್ಪಾಜ್‌(25), ಆನಂದ ಬಸ್ಸಿನ ನಿರ್ವಾಹಕ ವಿಜಯಕುಮಾರ್‌(25) ಎನ್ನುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಬಸ್‌ಗಳನ್ನು ವಶ ಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿಗೆ: ನೂರಾರು ವಿದ್ಯಾರ್ಥಿಗಳನ್ನು ದಾಖಲಿಸುವುದಾಗಿ ಹೇಳಿ ಖಾಸಗಿ ಕಾಲೇಜಿಗೆ 19.5 ಲಕ್ಷ ವಂಚನೆ


ಉಡುಪಿ: ನೂರಾರು ವಿದ್ಯಾರ್ಥಿಗಳನ್ನು ದಾಖಲಿಸುವುದಾಗಿ ಹೇಳಿ ಖಾಸಗಿ ಕಾಲೇಜಿಗೆ 19.5 ಲಕ್ಷ ವಂಚಿಸಿದ ವಿಚಿತ್ರ ಘಟನೆ ವರದಿಯಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

ನೇತ್ರಜ್ಯೋತಿ ಚಾರಿಟೇಬಲ್‌ ಟ್ರಸ್ಟ್‌, ಪ್ರಸಾದ್‌ ನೇತ್ರಾಲಯ ದಲ್ಲಿ ನೇತ್ರಾಜ್ಯೋತಿ ಕಾಲೇಜ್‌ ಆಫ್‌ ಪ್ಯಾರಾ ಮೆಡಿಕಲ್‌ ಸೈನ್ಸಸ್‌ ಮತ್ತು ನೇತ್ರಜ್ಯೋತಿ ಇನ್ಸ್ಟಿಟ್ಯೂಟ್‌ ಆಫ್‌ ಅಲೈಡ್‌ ಹೆಲ್ತ್‌ ಸೈನ್ಸಸ್‌ ಎಂಬ ಎರಡು ಅರೆ ವೈದ್ಯಕೀಯ ಕಾಲೇಜುಗಳು 2016 ರಿಂದ ಕಾರ್ಯಚರಿಸುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ವಿದ್ಯಾರ್ಥಿಗಳ ದಾಖಲಾತಿಯ ಬಗ್ಗೆ ಸಾಕಷ್ಟು ಪ್ರಚಾರವನ್ನು ಬೇರೆ ಬೇರೆ ಮಾಧ್ಯಮಗಳಲ್ಲಿ ನೀಡಿರುತ್ತಾರೆ. ಈ ವಿಚಾರವನ್ನು ಅರಿತು ಆರೋಪಿ ಕೇಶಮ್ ವಿಕ್ರಮ್‌ ಸಿಂಗ್‌ ಮಣಿಪುರ ರಾಜ್ಯ ರವರು ಮ್ಯಾನೇಜರ್’ಗೆ ವಾಟ್ಸ್‌ ಆಪ್‌ ಕರೆ ಮಾಡಿ ತನ್ನ ರಾಜ್ಯದಲ್ಲಿ ಅರೆ ವೈದ್ಯಕೀಯ ಶಿಕ್ಷಣಕ್ಕೆ ಸಿದ್ದರಿರುವ ಸಾವಿರಾರು ವಿಧ್ಯಾರ್ಥಿ/ವಿದ್ಯಾರ್ಥಿನಿಯರಿದ್ದಾರೆ. ಈ ವರ್ಷ 268 ವಿದ್ಯಾರ್ಥಿಗಳನ್ನು ಕರೆ ತಂದು ಸಂಸ್ಧೆಗೆ ದಾಖಲು ಮಾಡುತ್ತೇನೆ. ವಿದ್ಯಾರ್ಥಿಗಳನ್ನು ಕರೆ ತರಲು ಟ್ರೈನ್‌ ಹಾಗೂ ವಿಮಾನಕ್ಕೆ ತಗಲುವ ಖರ್ಚುಗಳನ್ನು ಸಂಸ್ಧೆಯಿಂದಲೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾನೆ. ಅದರಂತೆ ದಿನಾಂಕ 19/09/2024 ರಿಂದ ದಿನಾಂಕ 24/01/2025 ರವರೆಗೆ ಹಂತ ಹಂತವಾಗಿ 19,56,138/- ರೂಪಾಯಿ ಹಣವನ್ನು ಪಡೆದು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡದೇ ಮೋಸ ಮತ್ತು ವಂಚನೆ ಮಾಡಿದ್ದಾನೆ.

ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2025 ಕಲಂ: 66 (ಸಿ) ಐ.ಟಿ. ಆಕ್ಟ್. , 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಚೋದನಕಾರಿ ಭಾಷಣ : ಪ್ರಮೋದ್ ಮಧ್ವರಾಜ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ...!!

 


ಉಡುಪಿ : ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಾ.22ರಂದು ಮಲ್ಪೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಸ್ವಯಂ ಪ್ರೇರಿತ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕ ಸದಸ್ಯ ಪೀಠ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಪ್ರಮೋದ್ ಮಧ್ವರಾಜ್ ವಿರುದ್ಧ ತನಿಖೆಯನ್ನು ತಡೆಹಿಡಿದು ಆದೇಶ ನೀಡಿದೆ. 

ಪ್ರಮೋದ್ ಮಧ್ವರಾಜ್ ಪರವಾಗಿ ನ್ಯಾಯವಾದಿ ದಳವಾಯಿ ವೆಂಕಟೇಶ್ ವಾದಿಸಿದ್ದರು.

ಬೆಲೆ ಏರಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯದಾದ್ಯಂತ ಹೋರಾಟ: 2ರಿಂದ ಅಹೋರಾತ್ರಿ ಧರಣಿ

 


ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಏಪ್ರಿಲ್ 2ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ಸಾಮಾನ್ಯ ಜನರಿಗೆ ಸಿಕ್ಕಿರುವ ಏಕೈಕ ಖಾತರಿ ಬೆಲೆ ಏರಿಕೆ… ಈ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತಿದ್ದಾರೆ" ಎಂದು ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.

ಬೆಲೆ ಏರಿಕೆ ವಿರುದ್ಧ ಏಪ್ರಿಲ್ 2ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 5 ರಂದು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 7 ರಂದು ನಾವು ಮೈಸೂರಿನಿಂದ 'ಜನ ಆಕ್ರೋಶ ಯಾತ್ರೆ' ನಡೆಸಲಿದ್ದೇವೆ… ಪಕ್ಷದ ಎಲ್ಲಾ ನಾಯಕರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ" ಎಂದು ಅವರು ಹೇಳಿದರು. ಎಸ್ಸಿ ಮತ್ತು ಎಸ್ಟಿ ಸಮುದಾಯಗಳನ್ನು ನಿರ್ಲಕ್ಷಿಸುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ಸಮುದಾಯವನ್ನು ಓಲೈಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.

ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಬಜೆಟ್ ನೀಡಿಲ್ಲ. ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ಎಲ್ಲವನ್ನೂ ಹೇಳುತ್ತಾರೆ ಆದರೆ ಎಲ್ಲಾ ಹಿಂದೂ ಸಮುದಾಯಗಳನ್ನು ನಿರ್ಲಕ್ಷಿಸುತ್ತಾರೆ. ಸಿದ್ದರಾಮಯ್ಯ ಅವರು ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು. 


ಮಣಿಪಾಲ: ವ್ಯಕ್ತಿಯೊಬ್ಬರ ಜೊತೆ ಅಸಭ್ಯ ವರ್ತನೆ : ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು....!!


 ಉಡುಪಿ: ಸುಮಂತ್ ಎಂಬವರ ಜೊತೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಶರಣ ಬಸವ ಎನ್ನುವವರು ಅಸಭ್ಯವಾಗಿ ವರ್ತಿಸಿದ್ದಾರೆ. 

ಈ ಘಟನೆ ಬಗ್ಗೆ ಉಡುಪಿ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸ್ ಇಲಾಖೆ ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

ಘಟನೆ ವಿವರ:

ದಿನಾಂಕ 27.03.2025ರಂದು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಶರಣ ಬಸವ ಎನ್ನುವವರು ಸಾರ್ವಜನಿಕವಾಗಿ ಸುಮಂತ್ ಎಂಬವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಈ ಬಗ್ಗೆ ಸುಮಂತ್ ರವರು ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಯಾವುದೇ ದೂರು ಬೇಡ ಎಂದು ತಿಳಿಸಿದ್ದು, ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತವಾಗಿ ಪೊಲೀಸ್ ಕಾನ್ಸ್ಟೇಬಲ್ ಶರಣ ಬಸವ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ. 92(o)&(r) ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತದೆ ಹಾಗೂ ಈ ಬಗ್ಗೆ ಸೂಕ್ತ ಇಲಾಖಾ ವಿಚಾರಣೆ ನಡೆಸಲಾಗುವುದು.

ಬ್ರಹ್ಮಾವರ: ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಕಾರು ಡಿಕ್ಕಿ - ವಿಧ್ಯಾರ್ಥಿ ಸಾವು


 ಬ್ರಹ್ಮಾವರ: ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕ ಸ್ಥಳದಲ್ಲೇ ಸಾವನಪ್ಪಿದ ಘಟನೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಜಂಕ್ಷನ್‌ನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ವಂಶಿ ಜಿ ಶೆಟ್ಟಿ ಎಂದು ಗುರುತಿಸಲಾಗಿದೆ. ಬಾಲಕ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ತಕ್ಷಣ ಆತನನ್ನು ಮಹೇಶ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.


ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಂ.ಎಲ್. ಸಾಮಗ ಆಯ್ಕೆ


ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೇ 17 ಮತ್ತು 18ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಎಂ.ಎಲ್.ಸಾಮಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಿಕ್ಷಣ ತಜ್ಞ, ಯಕ್ಷಗಾನ ಕಲಾವಿದ, ವಾಗ್ಮಿ, ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಮಲ್ಪೆ ಲಕ್ಷ್ಮೀನಾರಾಯಣ ಸಾಮಗರನ್ನು ಕೊಡವೂರು ಶಂಕನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು ಹಾಗು ರಂಜನಿ ವಸಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


© all rights reserved
made with by templateszoo