ಉಡುಪಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಉಡುಪಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಉಡುಪಿ: ಸ್ಥಗಿತಗೊಂಡ ನರ್ಮ್ ಪುನಾರಂಭಕ್ಕೆ ಯುವಮೋರ್ಚಾ ಮನವಿ

 


ಉಡುಪಿ ನಗರ ಭಾಗದ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ಸುಮಾರು 9 ವರ್ಷಗಳ ಹಿಂದೆ ನರ್ಮ್ ಬಸ್ಸುಗಳು ಚಾಲನೆಗೊಂಡಿದ್ದು, ಈ ಬಸ್ಸುಗಳ ಓಡಾಟದಿಂದ ಸಾವರ್ಜನಿಕರ ಪ್ರಶಂಸೆಗೂ ಪಾತ್ರವಾಗಿತ್ತು,ಆದರೆ ಪ್ರಸ್ತುತ ಆ 13 ಬಸ್ಸುಗಳ ಓಡಾಟವನ್ನು ಖಾಯಂ ಆಗಿ ಸ್ಥಗಿತಗೊಳಿಸಲಾಗಿರುತ್ತದೆ. ಸ್ಥಗಿತಗೊಳಿಸಲಾಗಿರುವ 13 ರೂಟ್ ಗಳ ಬಸ್ಸುಗಳ ಓಡಾಟವನ್ನು ಪುನರಾರಂಭಿಸುವುದು ತೀರಾ ಅಗತ್ಯವಾಗಿರುತ್ತದೆ. ಅಲ್ಲದೆ ಸದ್ರಿ 45 ಬಸ್ಸು ಗಳ ಮಂಜೂರಾತಿಯು 10 ವರ್ಷಗಳ ಹಿಂದಿನ ಸಮೀಕ್ಷೆಯಂತೆ ಆಗಿರುತ್ತದೆ, ಹೊಸ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮತ್ತು ಪ್ರಸ್ತುತ ಪ್ರಯಾಣಿಕರ ಓಡಾಟದ ಸಂಖ್ಯೆಗೆ ಅನುಗುಣವಾಗಿ ಸದ್ರಿ ಬಸ್ಸುಗಳ ಸಂಖ್ಯೆಯನ್ನು ಕನಿಷ್ಠ 80 ನರ್ಮ್ ಬಸ್ಸುಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಲಾಗಿದೆ, ಹಾಗೂ ನಗರದಲ್ಲಿ ಕಾರ್ಯಾನಿರ್ವಹಿಸುತ್ತಿರುವ 32 ನರ್ಮ್ ಬಸ್ಸುಗಳು ತೀರಾ ಹಳೆಯದಾಗಿದ್ದು, ಮಾರ್ಗ ಮಧ್ಯೆ ಕೆಟ್ಟು ನಿಲ್ಲುವ ಘಟನಗಳೇ ಸಂಭವಿಸುತ್ತಿದೆ ಹಾಗೂ ಬಸ್ಸುಗಳಿಗೆ ಚಾಲಕರು ಮತ್ತು ನಿರ್ವಾಹಕರ ಕೊರತೆ ಇದ್ದು ಹುದ್ದೆ ಭರ್ತಿ ಮಾಡಬೇಕಾದ ಅನಿವಾರ್ಯತೆ ಇದೆ. ಸಮರ್ಪಕವಾದ ಬಸ್ ಸಂಚಾರ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಕಾರ್ಮಿಕರು, ವಯೋವೃದ್ಧರು ಕಾಲ್ನಡಿಗೆಯಲ್ಲಿ ಓಡಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಉಡುಪಿ ನಗರ ಯುವಮೋರ್ಚಾ ಜಿಲ್ಲಾಧಿಕಾರಿಗಳಿಗೆ ಈ ಎಲ್ಲಾ ಸಮಸ್ಯೆಗಳನ್ನು ವಿವರಿಸಿ ಅತೀ ಶೀಘ್ರದಲ್ಲಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಆಗ್ರಹಿಸಿದ್ದು, ನರ್ಮ್ ಬಸ್ಸು ಗಳ ಸೇವೆಯನ್ನು ಹೆಚ್ಚಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗೃವಾದ ಹೋರಾಟ ಕೈಗೆತ್ತಿಕೊಳ್ಳುವ ನಿರ್ಧಾರವನ್ನು ಮಾಡುವುದಾಗಿ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲಾಯಿತು.

 ಉಪಾಧ್ಯಕ್ಷರಾದ ಸಂದರ್ಶ ಆಚಾರ್ಯ, ಪ್ರಜ್ವಲ್ ಪೂಜಾರಿ, ಧನುಷ್ ಬಿ.ಕೆ., ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಪೈ ಮಣಿಪಾಲ, ಶಿವಪ್ರಸಾದ್, ಕಾರ್ಯದರ್ಶಿಗಳಾದ ಧನುಷ್‌ ಕಡಿಯಾಳಿ, ಹರ್ಷರಾಜ್, ಆಕಾಂಶ್, ಭೂಷಣ್, ದೀಕ್ಷಿತ್ ಶೆಟ್ಟಿ, ರಮಿತ್ ಶೆಟ್ಟಿ, ತರುಣ್.

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ

 


ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರನ್ನು ರಾಜ್ಯ ಸರಕಾರ ವರ್ಗಾವಣೆಗೊಳಿಸಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ. ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.

ಸ್ವರೂಪ ಟಿ.ಕೆ. ಈ ಹಿಂದೆ ಬೆಂಗಳೂರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ ಗವರ್ನೆನ್ಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಡಾ. ವಿದ್ಯಾ ಕುಮಾರಿಗೆ ಯಾವುದೇ ಹುದ್ದೆಯನ್ನು ತೋರಿಸಿಲ್ಲ ಎಂದು ತಿಳಿದು ಬಂದಿದೆ

ಕೋಮು ಸಂಘರ್ಷ ನಿಗ್ರಹ ವಿಶೇಷ ಕಾರ್ಯಪಡೆ ವ್ಯಾಪ್ತಿಗೆ ಉಡುಪಿ ಜಿಲ್ಲೆ ಸೇರ್ಪಡೆ ಮೂಲಕ ರಾಜ್ಯ ಸರ್ಕಾರದಿಂದ ಬ್ರ್ಯಾಂಡ್ ಉಡುಪಿ ಘನತೆಗೆ ಧಕ್ಕೆ ತರುವ ಯತ್ನ : ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ


ಕರಾವಳಿ ಜಿಲ್ಲೆಯ ಕೋಮು ಸಂಘರ್ಷ ನಿಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸದಾಗಿ ರಚಿಸಿರುವ ವಿಶೇಷ ಕಾರ್ಯ ಪಡೆಯ ವ್ಯಾಪ್ತಿಗೆ ಉಡುಪಿ ಜಿಲ್ಲೆಯನ್ನು ಸೇರ್ಪಡೆಗೊಳಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಉಡುಪಿ ಜಿಲ್ಲೆಯ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದು, ಈ ಕಾರ್ಯಪಡೆಯ ಮೂಲಕ ಉಡುಪಿ ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯನ್ನು ಈ ಕಾರ್ಯಪಡೆಯ ವ್ಯಾಪ್ತಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕಳೆದ ಹಲವು ದಶಕಗಳಿಂದ ಯಾವುದೇ ಕೋಮು ಸಂಘರ್ಷದ ಘಟನೆಗಳು ಉಡುಪಿ ಜಿಲ್ಲೆಯಲ್ಲಿ ವರದಿಯಾಗದಿದ್ದರೂ, ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಲಹೆ ಪಡೆಯದೆ ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ಯಾವುದೇ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಈ ಕಾರ್ಯಪಡೆಯನ್ನು ಉಡುಪಿ ಜಿಲ್ಲೆಯ ಜನತೆಯ ಮೇಲೆ ಹೇರಿದೆ. 

ರಾಜ್ಯ ಗೃಹ ಇಲಾಖೆಯ ವೈಫಲ್ಯವನ್ನು ಸರಕಾರವೇ ಈ ನಿರ್ಧಾರದಿಂದ ಒಪ್ಪಿಕೊಂಡಿದ್ದು, ರಾಜ್ಯದ 31 ಜಿಲ್ಲೆಗಳ ಪೈಕಿ ಕೇವಲ ಮೂರು ಜಿಲ್ಲೆಗಳನ್ನು ಕೋಮು ಸೂಕ್ಷ್ಮತೆಯ ನೆಪವೊಡ್ಡಿ ಈ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಪರೋಕ್ಷವಾಗಿ ರಾಷ್ಟ್ರಕ್ಕೆ ಸಂದೇಶ ನೀಡಿದಂತಾಗಿದೆ. 

ಬುದ್ಧಿವಂತರ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಉಡುಪಿ ನೆರೆಯ ಜಿಲ್ಲೆಗಳಲ್ಲಿ ಕೋಮು ಸಂಘರ್ಷದ ಘಟನೆಗಳು ನಡೆದಾಗಲು ಶಾಂತಿಯುತವಾಗಿದ್ದು, ತಮ್ಮ ಶಿಸ್ತು, ಸಂಯಮ, ಕಾನೂನು ಪಾಲನೆ ಹಾಗೂ ರಾಷ್ಟೀಯವಾದಿ ಚಿಂತನೆಯ ಮೂಲಕ ಕಾನೂನು ಸುವ್ಯವಸ್ಥೆಗೆ ಸದಾ ಸಹಕಾರ ನೀಡುವ ಜಿಲ್ಲೆಯ ಜನತೆಗೆ ರಾಜ್ಯ ಸರಕಾರ ಈ ಕಾರ್ಯ ಪಡೆಯನ್ನು ಹೇರುವ ಮೂಲಕ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ.

ಉಡುಪಿ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಗುಣ ಮಟ್ಟದ ಶಿಕ್ಷಣ ವ್ಯವಸ್ಥೆ, ಧಾರ್ಮಿಕ ಕೇಂದ್ರಗಳು, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬ್ರ್ಯಾಂಡ್ ಉಡುಪಿ ಯಾಗಿ ಗುರುತಿಸಿಕೊಂಡಿದ್ದು, ವಿವಿಧ ರಾಜ್ಯ ಹಾಗೂ ವಿವಿಧ ದೇಶಗಳ ಸಾವಿರಾರು ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ವಿಶೇಷ ಕಾರ್ಯಪಡೆಯ ಮೂಲಕ ಅತ್ಯಂತ ಶಾಂತಿಯುತವಾಗಿರುವ ಉಡುಪಿ ಜಿಲ್ಲೆಯನ್ನು ಕೋಮು ಹಿಂಸೆ ಪೀಡಿತ ಜಿಲ್ಲೆ ಎಂಬಂತೆ ರಾಷ್ಟ್ರಮಟ್ಟದಲ್ಲಿ ಬಿಂಬಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸುತ್ತಿದೆ.

ಕೋಮು ಸಂಘರ್ಷಕ್ಕೆ ಕಾರಣವಾಗಿರುವ ಕರಾವಳಿ ಜಿಲ್ಲೆಯಲ್ಲಿ ಅವ್ಯಾಹತವಾಗಿರುವ ನಡೆಯುತ್ತಿರುವ ಗೋವುಗಳ ಕಳ್ಳತನವನ್ನು ತಡೆಯಲು ಗೋ ಹಂತಕರ ವಿರುದ್ಧ ಗೋವು ಕಳ್ಳತನ ನಿಗ್ರಹ ವಿಶೇಷ ಕಾರ್ಯಪಡೆ ಯನ್ನು ರಾಜ್ಯ ಸರ್ಕಾರ ಆರಂಭಿಸಲಿ.

ಇದರಿಂದ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ, ಶಿಕ್ಷಣ ಸಂಸ್ಥೆಗಳು, ಪ್ರವಾಸೋದ್ಯಮ, ಕೈಗಾರಿಕೆಗಳು, ಧಾರ್ಮಿಕ ಕೇಂದ್ರಗಳಿಗೆ ದೊಡ್ಡ ಹೊಡೆತ ನೀಡಲಿದೆ. ಉಡುಪಿ ಜಿಲ್ಲೆಯ ಹೊಟೇಲ್ ಉದ್ಯಮ, ರಿಯಲ್ ಎಸ್ಟೇಟ್, ಸಣ್ಣ ಕೈಗಾರಿಕೆ ಮೊದಲಾದ ಕ್ಷೇತ್ರದ ಉದ್ಯಮಗಳು ಆರ್ಥಿಕ ಹಿಂಜರಿತದ ಗಂಭೀರ ಸಮಸ್ಯೆ ಎದುರಿಸುವ ಸನ್ನಿವೇಶ ಸೃಷ್ಟಿಯಾಗಲಿದೆ.

ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಮುಂದಾಗಿರುವ ಉದ್ಯಮಿಗಳು ಹಾಗೂ ಯುವ ಜನತೆಗೆ ಉದ್ಯೋಗಾವಕಾಶ ಸೃಷ್ಟಿಸಲಿರುವ ಐಟಿ ಬಿಟಿ ಕಂಪೆನಿಗಳು ಉಡುಪಿ ಜಿಲ್ಲೆಯನ್ನು ಕಡೆಗಣಿಸುವ ಸನ್ನಿವೇಶ ನಿರ್ಮಾಣವಾಗಲಿದೆ.

ರಾಜ್ಯ ಸರ್ಕಾರದ ಈ ರಾಜಕೀಯ ಪ್ರೇರಿತ ನಿರ್ಧಾರ ಶೈಕ್ಷಣಿಕ ಸಾಧನೆಯ ಜೊತೆ ಜೊತೆಗೆ ರಾಜ್ಯದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಜಿಲ್ಲೆಯ ಅಭಿವೃದ್ಧಿಗೆ ಕೊಡಲಿಯೇಟು ನೀಡಿದೆ.

ಉಡುಪಿ ಜಿಲ್ಲೆಯ 5 ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು, ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಹತಾಶಗೊಂಡಿರುವ ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡದೆ ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿದ್ದು, ಮತೀಯ ಶಕ್ತಿಗಳ ಒತ್ತಡಕ್ಕೆ ಮಣಿದು ಕೋಮು ಹಿಂಸೆ ನಿಗ್ರಹ ಪಡೆಯ ಮೂಲಕ ರಾಷ್ಟ್ರೀಯವಾದಿ ಚಿಂತನೆಯ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ರಾಜ್ಯ ವಿಶೇಷ ಕಾರ್ಯಪಡೆಯ ವ್ಯಾಪ್ತಿಯಿಂದ ಉಡುಪಿ ಜಿಲ್ಲೆಯನ್ನು ತಕ್ಷಣ ಕೈಬಿಡ ಬೇಕು ಹಾಗೂ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಅಭಿವೃದ್ದಿಯ ದೃಷ್ಟಿಯಿಂದ ವಿಶೇಷ ಕಾರ್ಯಪಡೆಯ ಔಚಿತ್ಯವನ್ನು ಪುನರ್ ವಿಮರ್ಶೆ ಮಾಡಿ ರದ್ದು ಮಾಡಬೇಕು.

ಉಡುಪಿಯ ಪ್ರಜ್ಞಾವಂತ ನಾಗರಿಕರು ಜಿಲ್ಲೆಯ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಒಕ್ಕೊರಲಿನಿಂದ ವಿರೋಧಿಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಸಂದರ್ಭ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಡುಪಿ ಎಸ್ಪಿ ಡಾ. ಅರುಣ್ ಕೆ ವರ್ಗಾವಣೆ, ನೂತನ ಎಸ್ಪಿ ಹರಿರಾಂ ಶಂಕರ್….!!

 


ಉಡುಪಿ : ಉಡುಪಿ ಎಸ್.ಪಿ ಡಾ. ಅರುಣ್ ಕೆ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ

ಉಡುಪಿ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹರಿರಾಂ ಶಂಕರ್ ಅವರನ್ನು ನೇಮಿಸಿದೆ.

ಉಡುಪಿ ನಗರ ಪ್ರಾಧಿಕಾರದ ಕೃಷಿ ವಲಯ, ಅವೈಜ್ಞಾನಿಕ ಉದ್ದೇಶಿತ ರಸ್ತೆ ಸಹಿತ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕರಡು ಅಧಿಸೂಚನೆ ಪ್ರಕಟ : ಯಶ್ಪಾಲ್ ಸುವರ್ಣ


ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಾಸವಿರುವ ಸಾರ್ವಜನಿಕರಿಗೆ ಮನೆ ನಿರ್ಮಾಣಕ್ಕೆ ಇದ್ದ ಹಲವಾರು ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆಯನ್ನು ಹೊರಡಿಸಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ಈ ಕರಡು ಅಧಿಸೂಚನೆಯಲ್ಲಿ ಕೃಷಿ ವಲಯದಲ್ಲಿ ಮನೆ ನಿರ್ಮಾಣದ ಉದ್ದೇಶಕ್ಕೆ ನಿಗದಿ ಪಡಿಸಿದ್ದ 11.1.2023 ರ ಗಡುವನ್ನು ರದ್ದುಪಡಿಸಿದ್ದು, ಅವೈಜ್ಞಾನಿಕ ಉದ್ದೇಶಿತ ರಸ್ತೆ, ಹೆಚ್.ಟಿ. ವಿದ್ಯುತ್ ಮಾರ್ಗ, ರೈಲು ಮಾರ್ಗ, ತೋಡು ಮತ್ತಿತರ ವಿಷಯಗಳಲ್ಲಿ ಝೋನಲ್ ರೆಗ್ಯುಲೇಷನ್ ನಲ್ಲಿ ವಾಸ್ತವಕ್ಕಿಂತ ಭಿನ್ನವಾಗಿ ನಮೂದಿಸಿದ ಅಂಶಗಳನ್ನು ಸರಿಪಡಿಸಲು ಹಾಗೂ ಸಾರ್ವಜನಿಕ ಅಥವಾ ಅರೆ ಸಾರ್ವಜನಿಕ ವಲಯವನ್ನಾಗಿ ತಪ್ಪಾಗಿ ಗುರುತಿಸಿರುವ ಸ್ಥಳಗಳ ಕ್ರಮಬದ್ಧ ಅವಕಾಶ ಕಲ್ಪಿಸಲಾಗಿದೆ.

ಉಡುಪಿ ನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿಯ ಹಲವಾರು ವರ್ಷಗಳಿಂದ ಮನೆ ನಿರ್ಮಾಣಕ್ಕೆ ತೊಡಕಾಗಿದ್ದ ಬಗ್ಗೆ ಈ ಹಿಂದೆ ನಗರಾಭಿವೃದ್ದಿ ಸಚಿವರು ಮತ್ತು ಅಧಿಕಾರಿಗಳಿಗೆ ಪತ್ರ ಬರೆದು ನಿಯಮಗಳನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದು ಮತ್ತು ಹಿಂದಿನ ವಿಧಾನಸಭಾ ಅಧಿವೇಶನದಲ್ಲಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದು, ಇದೀಗ ನಗರಾಭಿವೃದ್ದಿ ಇಲಾಖೆ ನಮ್ಮ ಮನವಿಗೆ ಸ್ಪಂದಿಸಿ ಕರಡು ಅಧಿಸೂಚನೆ ಹೊರಡಿಸುವ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸಿದೆ ಹಾಗೂ ಈ ಕರಡು ಅಧಿಸೂಚನೆ ಬಗ್ಗೆ ಸಾರ್ವಜನಿಕರು ತಮ್ಮ ಯಾವುದೇ ಸಲಹೆ ಸೂಚನೆಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ| ಮುಂದಿನ ೬ ದಿನಗಳ‌ ಕಾಲ ಭಾರೀ ಮಳೆ ಸಾಧ್ಯತೆ| ವಿವಿಧ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

 


ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ(ಮೇ 19) ಸತತವಾಗಿ ಆರು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ. ಬೀಸಲಿದ್ದು, ಬಹುತೇಕ ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ.

ಮೇ 19ರಂದು ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಮತ್ತು ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಹಾಸನ, ಕೋಲಾರ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮೇ 20ರಂದು ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮೇ 21ರಿಂದ 24ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಉಡುಪಿ ಎಸ್ಪಿ ಸಹಿತ ನಾಲ್ವರು ಪೊಲೀಸರಿಗೆ ‘ಡಿಜಿ – ಐಜಿಪಿ ಪ್ರಶಂಸಾ ಪದಕ’

ಉಡುಪಿ, ಮೇ 18: ರಾಜ್ಯದಲ್ಲಿ ಪ್ರಥಮ ಬಾರಿಗೆ ಆರಂಭಿಸಲಾದ ‘ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕ’ 2024-25ನೇ ಸಾಲಿನ ಪ್ರಶಸ್ತಿಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಸೇರಿದಂತೆ ಜಿಲ್ಲೆಯ ನಾಲ್ವರು ಪೊಲೀಸರು ಭಾಜನರಾಗಿದ್ದಾರೆ.

ಮಲ್ಪೆ ಕರಾವಳಿ ಕಾವಲು ಪೊಲೀಸ್‌ನ ಎಸ್ಸೈ ವೈಲೆಟ್ ಫೆಮಿನಾ, ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಗುರುದಾಸ್, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್ಮ್ಡ್ ಹೆಡ್ ಕಾನ್‌ಸ್ಟೇಬಲ್ ಸಂತೋಷ್ ಕೂಡ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಲ್ಪೆ - ಆದಿ ಉಡುಪಿ ರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

 


ಮಲ್ಪೆ ಆದಿ ಉಡುಪಿ ಹೆದ್ದಾರಿ ರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಲ್ಪೆ ಫಿಶರೀಶ್ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಮನವಿಯ ಮೇರೆಗೆ ಹೆದ್ದಾರಿ ಕಾಮಗಾರಿಗಾಗಿ ತೆರವು ಮಾಡಿರುವ ಶಾಲೆಯ ಆವರಣ ಗೋಡೆಯನ್ನು ಶಾಲೆಯ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಮರು ನಿರ್ಮಾಣ ಮಾಡುವಂತೆ ರಾಷ್ಟೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲ್ಪೆ ಎಳೂರು ಮೊಗವೀರ ಭವನದ ಬಳಿ ಈ ಹಿಂದೆ ಗಣೇಶೋತ್ಸವ ಸಮಿತಿಯ ವತಿಯಿಂದ ನಿರ್ಮಿಸಿದ್ದ ಬಸ್ಸು ನಿಲ್ದಾಣವನ್ನು ತೆರವು ಮಾಡಿದ್ದು, ಈಗ ಯಾವುದೇ ಬಸ್ ನಿಲ್ದಾಣವಿಲ್ಲದೆ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಬಿಸಿಲು ಗಾಳಿ ಮಳೆಗೆ ರಕ್ಷಣೆ ಇಲ್ಲದೆ ತೊಂದರೆ ಎದುರಿಸುತ್ತಿದ್ದು, ಬಾಕಿ ಉಳಿದಿರುವ ಮರವನ್ನು ತೆರವು ಮಾಡಿ ತಾತ್ಕಾಲಿಕ ಬಸ್ಸು ನಿಲ್ದಾಣ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮುಂದಿನ ಹಂತದಲ್ಲಿ ಕಟ್ಟಡಗಳ ತೆರವು ಸಂದರ್ಭದಲ್ಲಿ ಕಟ್ಟಡಗಳ ಮಾಲೀಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಹಾಗೂ ಸಾರ್ವಜನಿಕರು ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಹಕಾರ ನೀಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀ ಸುಂದರ ಕಲ್ಮಾಡಿ, ಶ್ರೀಮತಿ ಎಡ್ಲಿನ್ ಕರ್ಕಡ, ಶ್ರೀ ಶ್ರೀಶ ಕೊಡವೂರು, ಶ್ರೀಮತಿ ಲಕ್ಷ್ಮೀ ಮಂಜುನಾಥ, ರಾಷ್ಟೀಯ ಹೆದ್ದಾರಿ ಇಲಾಖೆಯ ಶ್ರೀ ಮಂಜುನಾಥ ನಾಯಕ್, ಗ್ರಾಮ ಆಡಳಿತಾಧಿಕಾರಿ ಶ್ರೀ ಕಾರ್ತಿಕೇಯ ಭಟ್, ಸ್ಥಳೀಯ ಮುಖಂಡರಾದ ಶ್ರೀ ಮಂಜು ಕೊಳ, ಶ್ರೀ ಸುರೇಶ್ ಕುಂದರ್, ಫೀಶರೀಶ್ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.





ಉಡುಪಿ: ಗಿರಿಜಾ ಸರ್ಜಿಕಲ್ಸ್ ವತಿಯಿಂದ ನರ್ಸಸ್ ಡೇ ಆಚರಣೆ


 ಉಡುಪಿ ಜಿಲ್ಲೆಯಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿರುವ ದಾದಿಯರ (ನರ್ಸಸ್) ಹೆಮ್ಮೆಯ ಸೇವೆಯನ್ನು ಗುರುತಿಸಿ, ಅವರ ಪ್ರಯತ್ನಗಳಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಗಿರಿಜಾ ಸರ್ಜಿಕಲ್ಸ್ ಹಾಗೂ ಸೀನಿಯರ್ ಜೆಸಿಐ, ಟೆಂಪಲ್ ಸಿಟಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ ನಡೆಸಲಾಯಿತು.

ಕಾರ್ಯಕ್ರಮವು ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿದ್ದು, ನರ್ಸಿಂಗ್ ವೃತ್ತಿಯ ಮಹತ್ವ, ದಾದಿಯರ ತ್ಯಾಗಮಯ ಜೀವನ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅವರ ಪಾತ್ರವನ್ನು ವಿಶೇಷವಾಗಿ ಪ್ರತಿಪಾದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸರ್ಜನ್ ಡಾ. ಅಶೋಕ್, ಆಸ್ಪತ್ರೆಯ RMO ಡಾ. ವಾಸುದೇವ, ಸೀನಿಯರ್ ಜೆಸಿಐ ಅಧ್ಯಕ್ಷ ಶ್ರೀ ಶಿವಾನಂದ ಶೆಟ್ಟಿಗಾರ್, ಹಾಗೂ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ರವೀಂದ್ರ ಶೆಟ್ಟಿ ಕಡೆಕಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದಾದಿಯರಿಗೆ ಪ್ರಾಮುಖ್ಯತೆ ನೀಡುವ ಬಗ್ಗೆ ಮಾತನಾಡಿದರು.

ಹಿರಿಯ ಐದು ಮಂದಿ ದಾದಿಯರನ್ನು ವಿಶೇಷವಾಗಿ ಸನ್ಮಾನಿಸಲಾಗಿದ್ದು, ಉಳಿದ ಎಲ್ಲಾ ನರ್ಸಿಂಗ್ ಸಿಬ್ಬಂದಿಯ ಸೇವೆಗೂ ಗೌರವಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು. ಆಸ್ಪತ್ರೆಯ ನರ್ಸಿಂಗ್ ಸುಪರಿಂಟೆಂಡೆಂಟ್ ರತ್ನವತಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.

ಇದೇ ಸಂದರ್ಭದಲ್ಲಿ ಸೀನಿಯರ್ ಜೆಸಿಐ ಸದಸ್ಯರು, ಗಿರಿಜಾ ಸರ್ಜಿಕಲ್ಸ್ ನ ಸಿಬ್ಬಂದಿ ವರ್ಗ, ಹಾಗೂ ಹಲವಾರು ಆರೋಗ್ಯ ಸೇವಾ ತಜ್ಞರು ಹಾಜರಿದ್ದರು.

ಗಿರಿಜಾ ಸರ್ಜಿಕಲ್ಸ್ ಸಂಸ್ಥೆಯು ಉಡುಪಿಯ ಹೊರತಾಗಿಯೂ ಕುಂದಾಪುರ ಮತ್ತು ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಕೂಡ ನರ್ಸಸ್ ಡೇ ಕಾರ್ಯಕ್ರಮಗಳನ್ನು ಆಯೋಜಿಸಿ, ಸ್ಥಳೀಯ ದಾದಿಯರ ಸೇವೆಗೆ ಗೌರವ ಸಲ್ಲಿಸಿದೆ.

ಈ ಪ್ರಯತ್ನವು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ದಾದಿಯರಲ್ಲಿ ಹೊಸ ಉತ್ಸಾಹವನ್ನು ತುಂಬಿದ್ದು, ನರ್ಸಿಂಗ್ ವೃತ್ತಿಗೆ ಹೆಚ್ಚಿನ ಮಾನ್ಯತೆ ನೀಡುವತ್ತ ಗಮನ ಸೆಳೆಯುತ್ತಿದೆ.








ಉಡುಪಿ: ಕುಡಿದ ಮತ್ತಿನಲ್ಲಿ ಮನೆಗೆ ಬೆಂಕಿಯಿಟ್ಟ ವ್ಯಕ್ತಿ..!

 


ಉಡುಪಿ,ಮೇ.11: ಅತಿಮಧ್ಯ ಸೇವನೆಯಿಂದ ಅಮಲೇರಿದ ಕುಡುಕನೊಬ್ಬ, ತ‌ನ್ನದೆ ಮನೆಗೆ ಬೆಂಕಿ‌ ಹಿಡಿಸಿರುವ ಘಟನೆಯು, ನಗರದ ಹೊರವಲಯದ ಚಿಟ್ಪಾಡಿಯಲ್ಲಿ ರವಿವಾರ ನಡೆದಿದೆ.

ಕುಡುಕನ ರಂಪಾಟ, ಉಗ್ರ ವರ್ತನೆ ಎದುರಿಸಲು ಅಸಹಾಯಕರಾದ ಮನೆಯವರು, ಸಮಾಜಸೇವಕ ನಿತ್ಯಾನಂದ‌ ಒಳಕಾಡುವರಲ್ಲಿ ನೆರವಿಗೆ ಬರುವಂತೆ ಹೇಳಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಒಳಕಾಡುವರು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ದೊಡ್ಡ ಪ್ರಮಾಣದಲ್ಲಿ ಆಗಬಹುದಾದ ಅಗ್ನಿದುರಂತವನ್ನು ತಪ್ಪಿಸಿದ್ದಾರೆ. ಬಳಿಕ ಒಳಕಾಡುವರು ಕುಡುಕನ‌‌ ಮೊನವೊಲಿಸಿ ಮಧ್ಯವರ್ಜನ‌ ಕೇಂದ್ರಕ್ಕೆ ದಾಖಲುಪಡಿಸಿದ್ದಾರೆ.

ಉಡುಪಿ: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ


ಉಡುಪಿ: ‘ಕಾಮಿಡಿ ಕಿಲಾಡಿಗಳು ಸೀಸನ್ -3’ ವಿನ್ನರ್ ಆಗಿದ್ದ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ.

ಕಾಮಿಡಿ ಕಿಲಾಡಿಗಳು ಸೀಸನ್ 3ಯಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಮನರಂಜನೆ ನೀಡುತ್ತಿದ್ದ ಜನಪ್ರಿಯ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಘಾತರಿಂದ ನಿಧನರಾಗಿದ್ದಾರೆ.

ರಾಕೇಶ್ ಪೂಜಾರಿ ಅವರು ಉಡುಪಿ ನಿವಾಸಿಯಾಗಿದ್ದರು. ನಿನ್ನೆ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ನಿಧನರಾಗಿದ್ದಾರೆ. ಈ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟ ರಾಕೇಶ್ ಪೂಜಾರಿ ಈಗ ಹಿಟ್ಲರ್ ಕಲ್ಯಾಣ ಸೇರಿದಂತೆ ಸಿನಿಮಾಗಳು, ಧಾರಾವಾಹಿಗಳಲ್ಲಿ ಕಾಮಿಡಿ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತ-ಪಾಕ್ ಉದ್ವಿಗ್ನತೆ: ಯಕ್ಷಗಾನದಲ್ಲೂ ಪ್ರತಿಧ್ವನಿಸಿದ 'ಆಪರೇಷನ್ ಸಿಂಧೂರ'!

 


ಉಡುಪಿ, ಮೇ ೯: ಕರಾವಳಿಯ ಗಂಡುಕಲೆ ಎಂದೇ ಖ್ಯಾತಿವೆತ್ತ ಯಕ್ಷಗಾನ ಕೇವಲ ಪುರಾಣ ಕಥೆಗಳಿಗೆ ಸೀಮಿತವಾಗದೆ ಸಮಕಾಲೀನ ವಿಷಯಗಳಿಗೂ ಸ್ಪಂದಿಸುತ್ತಿದೆ. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಘ್ನ ಪರಿಸ್ಥಿತಿ ಹಾಗೂ ಭಾರತವು ನಡೆಸಿದ 'ಆಪರೇಷನ್ ಸಿಂಧೂರ'ದ ಕುರಿತಾದ ಸಂಭಾಷಣೆಯೊಂದು ಯಕ್ಷಗಾನದ ರಂಗಸ್ಥಳದಲ್ಲಿ ಕೇಳಿಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾವಂಜೆ ಮೇಳದ ಕಲಾವಿದ ದಿನೇಶ್ ಶೆಟ್ಟಿ ಅವರು ಆಪರೇಷನ್ ಸಿಂಧೂರದ ಕುರಿತು ಮಾತನಾಡುತ್ತಿರುವ ವಿಡಿಯೋವನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ದಿನೇಶ್ ಶೆಟ್ಟಿ ಅವರು, "ಈ ಪವಿತ್ರವಾದ ನೆಲದಲ್ಲಿ ನಾನು ಹುಟ್ಟಿದವನು. ಪವಿತ್ರವಾದ ಸಂಸ್ಕಾರವನ್ನು ಪಡೆದವನು. ಈ ನೆಲವನ್ನು ನಾವು ತಾಯಿಯೆಂದು ಕರೆಯುತ್ತೇವೆ. ತಾಯಿಯೆಂದು ಕರೆಯುವ ಈ ನೆಲ ಬಿಟ್ಟರೆ ನಮಗೆ ಬೇರೊಂದಿಲ್ಲ. ಹೀಗಾಗಿ ನಮಗೆ ದೇಶಪ್ರೇಮವನ್ನು ಕಲಿಸಿದೆ, ದೇಶದ್ರೋಹ ಮಾಡುವುದನ್ನಲ್ಲ" ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸ್ತ್ರೀ ವೇಷಧಾರಿಯೊಬ್ಬರು, "ಈ ತಾಯಿಯ ಸಿಂಧೂರ ಅಳಿಸಲು ಬಂದರೆ ಏನು ಮಾಡೋದು?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ದಿನೇಶ್ ಶೆಟ್ಟಿ ಅವರು, "ತಾಯಿಯ ಸಿಂಧೂರವನ್ನು ಒರೆಸುತ್ತೇನೆಂದು ಬಂದರೆ, ಈ ನೆಲದ ಒಬ್ಬಳು ಹೆಣ್ಣಿನ ಸಿಂಧೂರ ಒರೆಸಿದರೆ ವೈರಿಗಳ ಸಾವಿರಾರು ಮಡದಿಯಂದಿರ ಸಿಂಧೂರ ಅಳಿಸುವುದಕ್ಕೆ ನಾವೆಲ್ಲಾ ಸಿದ್ಧರಾಗಿ ನಿಂತಿದ್ದೇವೆ" ಎಂದು ದಿಟ್ಟ ಉತ್ತರ ನೀಡಿದ್ದಾರೆ.

ಕಲಾವಿದರ ಈ ದೇಶಭಕ್ತಿಪೂರಿತ ಮಾತುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಯಕ್ಷಗಾನದಂತಹ ಕಲೆಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಪ್ರಸ್ತುತ ವಿದ್ಯಮಾನಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ದೇಶಪ್ರೇಮವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.



ಉಡುಪಿ : ಗ್ರಾ.ಪಂ. ಅಧ್ಯಕ್ಷರ ಆಯ್ಕೆ : ಚುನಾವಣಾಧಿಕಾರಿಗಳ ನೇಮಕ…!!


ಉಡುಪಿ: ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಪಂಚಾಯತ್‌ನ
ಮುಂದಿನ ಅವಧಿಗೆ ಅಧ್ಯಕ್ಷ ಸ್ಥಾನವನ್ನು (ಮೀಸಲಾತಿ – ಸಾಮಾನ್ಯ) ಆಯ್ಕೆ ಮಾಡುವ ಸಲುವಾಗಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್ ಅವರನ್ನು ಗೊತ್ತು ಪಡಿಸಿದ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು,

ಸದ್ರಿರವರು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 45 ಹಾಗೂ (ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆ) ನಿಯಮಗಳು 1995 ರ ನಿಯಮ 4 ರಿಂದ 11ರವರೆಗಿನ ನಿಯಮದಂತೆ ಚುನಾವಣೆ ನಡೆಸಿ, ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪರೇಷನ್ ಸಿಂಧೂರ ಮೂಲಕ ಅಮಾಯಕ ಹಿಂದೂಗಳ ಪ್ರತಿ ಹನಿ ರಕ್ತಕ್ಕೂ ನ್ಯಾಯ ಒದಗಿಸಿದ ನರೇಂದ್ರ ಮೋದಿ ಸರ್ಕಾರ: ಯಶ್ಪಾಲ್ ಸುವರ್ಣ


ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ 'ಆಪರೇಷನ್ ಸಿಂಧೂರ'ದ ಮೂಲಕ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಲಷ್ಕರೆ ತೊಯ್ಬಾ ಮತ್ತು ಜೈಶೆ ಮೊಹಮ್ಮದ್ ಸಂಘಟನೆಗಳ 9 ನೆಲೆಗಳನ್ನು ಧ್ವಂಸಗೊಳಿಸಿ, ನೂರಾರು ಮತಾಂಧ ಉಗ್ರರ ಮಾರಣಹೋಮ ನಡೆಸಿ ಉಗ್ರವಾದವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂಬ ದಿಟ್ಟ ಸಂದೇಶವನ್ನು ಜಗತ್ತಿಗೆ ಸಾರುವ ಮೂಲಕ ಭಯೋತ್ಪಾದಕರ ಗುಂಡಿಗೆ ಬಲಿಯಾದ ಅಮಾಯಕ ಹಿಂದೂಗಳ ಪ್ರತಿ ಹನಿ ರಕ್ತಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನ್ಯಾಯ ಒದಗಿಸಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

26 ಅಮಾಯಕರನ್ನು ಬಲಿಪಡೆದ ಉಗ್ರರರನ್ನು ಪಾಕಿಸ್ತಾನದ ಒಳಗಡೆ ಹೋಗಿ ಭಾರತೀಯ ಸೇನೆ ಹೊಡೆದುರುಳಿಸಿದೆ. ಯುದ್ಧದ ಉದ್ವಿಗ್ನತೆ ನಡುವೆಯೇ ಪಾಕ್‌ ವಿರುದ್ಧ ಭಾರತ ಸೇಡನ್ನು ತೀರಿಸಿಕೊಂಡಿದ್ದು, ‌ಪಾಕ್‌ ಹಾಗೂ ಪಿಒಕೆಯ 9 ಉಗ್ರರ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿರುವ ಭಾರತ ಉಗ್ರರ ಹುಟ್ಟಡಗಿಸಿ ಪಹಲ್ಗಾಮ್‌ ದಾಳಿಗೆ ಆಪರೇಷನ್‌ ಸಿಂಧೂರ ಮೂಲಕ ಭಾರತ ಪ್ರತೀಕಾರವನ್ನು ತೀರಿಸಿಕೊಂಡಿದೆ.

ಭಾರತೀಯ ಹಿಂದೂ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸರ್ಕಾರ ‘ಆಪರೇಷನ್‌ ಸಿಂಧೂರ’ ಎಂದು ಕಾರ್ಯಾಚರಣೆಗೆ ನಾಮಕರಣ ಮಾಡಿ ಅತ್ಯಂತ ಯಶಸ್ವಿಯಾಗಿ ಅತ್ಯಂತ ಕ್ಷಿಪ್ರ ಹಾಗೂ ಪರಾಕ್ರಮ ಮೆರೆದು ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡಿದ ಭಾರತೀಯ ಸೇನೆಯ ರಕ್ಷಣಾ ಸಲಹೆಗಾರರಾದ ಶ್ರೀ ಅಜಿತ್ ಧೋವಲ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಹಾಗೂ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಪರಾಕ್ರಮ ಮೆರೆದ ವೀರ ಸೈನಿಕರಿಗೆ ದೇಶದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ದೇಶದ ಜನತೆ ನರೇಂದ್ರ ಮೋದಿ ಸರ್ಕಾರದ ಮೇಲೆ ಭರವಸೆ ಇಟ್ಟು ಮತದಾನ ಮಾಡಿದ ಪ್ರತಿಯೋರ್ವ ಭಾರತೀಯನ ಮತಕ್ಕೆ ಇಂದು ಗೌರವ ಸಲ್ಲಿಸುವ ಕೆಲಸವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ, ಗೃಹ ಸಚಿವ ಶ್ರೀ ಅಮಿತ್ ಶಾ, ರಕ್ಷಣಾ ಸಚಿವ ಶ್ರೀ ರಾಜನಾಥ ಸಿಂಗ್ ಹಾಗೂ ಸಚಿವ ಸಂಪುಟದ ಸಚಿವರು ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಕಲಬುರಗಿಗೆ ಕೊನೆ ಸ್ಥಾನ


ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು (ಮೇ 02) ಎಸ್‌ಎಸ್‌ಎಲ್‌ಸಿ ಪರೀಕ್ಷೆ -1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟಾರೆ ಶೇ. 66.14 ಮಕ್ಕಳು ತೇರ್ಗಡೆಯಾಗಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ದಕ್ಷಿಣ ಕನ್ನಡ (91.12%) ಹಾಗೂ ಉಡುಪಿ ಜಿಲ್ಲೆ(89.96%) ಹಾಗೂ ಉತ್ತರ ಕನ್ನಡ ಜಿಲ್ಲೆಗೆ(83.19%) ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಸಿಕ್ಕಿದೆ. ಕಲಬುರಗಿ ಜಿಲ್ಲೆಗೆ ರಾಜ್ಯದಲ್ಲಿ ಕೊನೆ ಸ್ಥಾನ ದೊರೆತಿದೆ.

ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಇಂದು ಬೆಳಗ್ಗೆ 11.30ಕ್ಕೆ ಮಂಡಳಿಯ ಅಧಿಕಾರಿಗಳ ಜತೆ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶವನ್ನು ಪ್ರಕಟಿಸಿದರು. ಮಂಡಳಿಯ ವೆಬ್‌ಸೈಟ್ https://karresults.nic.in ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಈ ಬಾರಿ 22 ವಿದ್ಯಾರ್ಥಿಗಳುನ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.

ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕರ್ನಾಟಕದಾದ್ಯಂತ 15,881 ಪ್ರೌಢಶಾಲೆಗಳಿಂದ 4,61,563 ಹುಡುಗರು ಮತ್ತು 4,34,884 ಹುಡುಗಿಯರು ಪರೀಕ್ಷೆಗೆ ದಾಖಲಾಗಿದ್ದರು

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 8.9 ಲಕ್ಷ ವಿದ್ಯಾರ್ಥಿಗಳು ಕರ್ನಾಟಕ ಮಂಡಳಿಯ 10 ನೇ ತರಗತಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅವರಲ್ಲಿ 4.5 ಲಕ್ಷ ಹುಡುಗರು ಮತ್ತು 4.3 ಲಕ್ಷ ಹುಡುಗಿಯರು ವಾರ್ಷಿಕ ಮಂಡಳಿ ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಉತ್ತೀರ್ಣ ಶೇಕಡಾವಾರು 73.40 ರಷ್ಟಿತ್ತು, ಇದು 2023 ರಲ್ಲಿ 83.89 ಪ್ರತಿಶತ ಮತ್ತು 2022 ರಲ್ಲಿ 85.13 ಪ್ರತಿಶತದಿಂದ ಕಡಿಮೆಯಾಗಿದೆ.


ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಇಂದು ಮಂಗಳೂರು ಬಂದ್; ಉಡುಪಿ - ಮಂಗಳೂರು ಬಸ್ ಸಂಚಾರ ಸ್ಥಬ್ಧ

ಉಡುಪಿ : ಕೊಡವೂರಿನ ಜುಮಾದಿ ಕೋಲ ಆಚರಣೆ ಹಿನ್ನೆಲೆ ನಿಷೇಧಾಜ್ಞೆ ಜಾರಿ

 


ಉಡುಪಿ, ಮೇ 1:ಜುಮಾದಿ ಕೋಲ ಆಚರಣೆ ಹಿನ್ನೆಲೆ, ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಪಳ್ಳಿ ಜಿಡ್ಡ ಎಂಬಲ್ಲಿ ಸ. ನಂಬರ್ 53/6 ರ 0.67 ಎಕ್ರೆ ವಿವಾದಿತ ಸರಕಾರಿ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ಮೇ 2 ರ ರಾತ್ರಿ 11 ಗಂಟೆಯಿಂದ ಮೇ 3 ರ ಬೆಳಗ್ಗೆ 11 ಗಂಟೆಯವರೆಗೆ ನಿರ್ಬಂಧ ಸಡಿಲಿಸಿ ಕೇವಲ 8 ಜನರಿಗೆ ಮಾತ್ರ ಪ್ರವೇಶಿಸಲು ಅನುಮತಿನೀಡಲಾಗಿದೆ. ಮೇ 3 ರ ಬೆಳಗ್ಗೆ 11 ಗಂಟೆಯಿಂದ ಮೇ 4 ರ ಬೆಳಗ್ಗೆ 5 ಗಂಟೆಯವರೆಗೆ ಯಾರು ಪ್ರವೇಶಿಸದಂತೆ ನಿರ್ಬಂದಿಸಿ ಕಲಂ 163 ಬಿ. ಎನ್. ಎಸ್. ಎಸ್ ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಧಿಕಾರಿಯು ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಅದೇಶಿಸಿರುತ್ತಾರೆ.

ಈ ಸಂದರ್ಭದಲ್ಲಿ ವಿವಾದಿತ ಸರಕಾರಿ ಸ್ಥಳದಲ್ಲಿ ಮೇ 2 ರಂದು ರಾತ್ರಿ 11 ಗಂಟೆಯಿಂದ ಮೇ 3 ರ ಬೆಳಿಗಿನ 11:00 ಗಂಟೆಯ ತನಕ ನಿರ್ಭಂದ ಸಡಿಲಿಸಿ ಕೇವಲ 8 ಜನರಿಗೆ ಮಾತ್ರ ಪ್ರವೇಶಿಸಲು ಅನುನುತಿ ನೀಡಲಾಗಿದೆ.

ಮೇ 3 ರಂದು ಬೆಳಗ್ಗೆ 11 ಗಂಟೆಯಿಂದ ಮೇ 4 ರ ಬೆಳಗ್ಗೆ 5 ಗಂಟೆಯವರೆಗೆ ಯಾರು ಪ್ರವೇಶಿಸದಂತೆ ನಿಭಂದಿಸಲಾಗಿದೆ.

ಶಸ್ತ್ರಾಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು, ಗದೆಗಳು, ಬಂದೂಕುಗಳು, ಚಾಕುಗಳು, ಕೋಲುಗಳ ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.

ಪಟಾಕಿಗಳನ್ನು ಸಿಡಿಸುವುದು, ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಒಯ್ಯುವುದನ್ನು ನಿಷೇಧಿಸಿದೆ.

ಕಲ್ಲುಗಳನ್ನು ಅಥವಾ ಇತರ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು, ಶೇಖರಿಸುವುದನ್ನು ಮತ್ತು ತಯಾರಿಸುವುದನ್ನು ನಿಷೇಧಿಸಿದೆ.

ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಮಾಡುವುದು, ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಅವೇಶಭರಿತ ಭಾಷಣ ಮಾಡುವುದು, ಇಂಗಿತ ಸೂಚನೆಗಳ ಅಥವಾ ಅಂಕ ನಿರೂಪಣೆಗಳನ್ನು ಪ್ರಯೋಗ ಮಾಡುವುದು, ಮತ್ತು ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿ ಪತ್ರಗಳನ್ನು ಅಥವಾ ಇತರೆ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.

ಯಾವುದೇ ವ್ಯಕ್ತಿಯು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ

ಕಾರ್ಕಳ : ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ : ಆರೋಪಿ ಪ್ರತಿಮಾಳ ಜಾಮೀನು ಅರ್ಜಿ ಮತ್ತೆ ತಿರಸ್ಕೃತ…!!

 


ಕಾರ್ಕಳ : ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮೃತರ ಪತ್ನಿ ಪ್ರತಿಮಾಳ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳ ಮತ್ತೊಮ್ಮೆ ತಿರಸ್ಕರಿಸಿ ಮಂಗಳವಾರ ಆದೇಶ ನೀಡಿದೆ.

ಕೆಲವು ದಿನಗಳ ಹಿಂದೆ ಪ್ರಕರಣದ ಇನ್ನೋರ್ವ ಆರೋಪಿ ದಿಲೀಪ್ ಹೆಗ್ಡೆಗೆ ಹೈಕೋರ್ಟ್ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಕಳೆದ ವಾರ ಪ್ರತಿಮಾ ಜಾಮೀನು ಕೋರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳ ಇಲ್ಲಿ ಅರ್ಜಿ ಸಲ್ಲಿಸಿದ್ದರು. ಎರಡನೇ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿರುವುದರಿಂದ ತನಗೂ ಜಾಮೀನು ನೀಡುವಂತೆ ಪ್ರತಿಮಾ ಕೋರಿಕೊಂಡಿದ್ದಳು.

ಇದಕ್ಕೆ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿಸಿ, ಎರಡನೇ ಆರೋಪಿಗೆ ಜಾಮೀನು ನೀಡಿದ್ದರೂ ಈಕೆಗೆ ಜಾಮೀನು ನೀಡಲು ಆಗುವುದಿಲ್ಲ. ಅವರಿಬ್ಬರ ಮೇಲಿನ ಆರೋಪಕ್ಕೆ ಸಾಮ್ಯತೆ ಇಲ್ಲ. ಆದುದರಿಂದ ಆಕೆಯ ಜಾಮೀನು ಅರ್ಜಿ ತಿರಸ್ಕಾರ ಮಾಡಬೇಕು ಎಂದು ವಾದಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಸಮಿವುಲ್ಲಾ, ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಈಕೆ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ 2024ರ ಅ.20ರಂದು ತನ್ನ ಪತಿ ಬಾಲಕೃಷ್ಣ ಪೂಜಾರಿ ಅವರನ್ನು ಕೊಲೆ ಮಾಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಅ.25ರಂದು ಅಜೆಕಾರು ಪೊಲೀಸರು ಬಂಧಿಸಿದ್ದರು.

ಬ್ರಹ್ಮಾವರದಲ್ಲಿ ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಆರೋಪಿಗಳು ಪೊಲೀಸ್ ವಶಕ್ಕೆ…!!

 


ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಮಹಿಳೆಯೊಬ್ಬರ ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ತಾಲೂಕಿನ ಹುಟಕಮನೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬಂಧಿಸಿ ಬ್ರಹ್ಮಾವರ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.

ಬ್ರಹ್ಮಾವರದಲ್ಲಿ ಎ.26ರ ಶನಿವಾರ ಬೆಳಿಗ್ಗೆ ಗೋವಾ ಮೂಲದ, ಹಾಲಿ ಹುಬ್ಬಳ್ಳಿಯಲ್ಲಿ ವಾಸವಾಗಿರುವ ಮೊಯಿನುದ್ದೀನ್, ಸುಜೀತ ಹಾಗೂ ಗೌರೀಶ ಎಂಬ ಆರೋಪಿಗಳು ಮಹಿಳೆಯೊಬ್ಬರ ಸುಮಾರು 50 ಗ್ರಾಂ. ತೂಕದ ಕರಿಮಣಿ ಚೈನನ್ನು ಕಸಿದುಕೊಂಡು ಹೊಂಡಾ ಕಾರಿನಲ್ಲಿ ಪರಾರಿಯಾಗಿದ್ದರು.

ಇವರ ಕಾರನ್ನು ಬ್ರಹ್ಮಾವರ ಪೊಲೀಸರು ಹಿಂಬಾಲಿಸಿದ್ದರು. ಆರೋಪಿಗಳ ಕಾರು ಯಲ್ಲಾಪುರದ ಕಡೆಗೆ ಧಾವಿಸಿದ್ದನ್ನು ಕಂಡು ಯಲ್ಲಾಪುರ ಪೊಲಿಸರಿಗೆ ಮಾಹಿತಿ ನೀಡಲಾಗಿತ್ತು.

ಯಲ್ಲಾಪುರದಲ್ಲಿ ಅವರ ಕಾರನ್ನು ಪೊಲೀಸರು ತಡೆದಾಗ ಆರೋಪಿಗಳು ಕಾರನ್ನು ನಿಲ್ಲಿಸದೇ ಪರಾರಿಯಾದರು. ರಸ್ತೆಯ ಗಟಾರದಲ್ಲಿ ಕಾರಿನ ಚಕ್ರ ಸಿಲುಕಿದಾಗ ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ಅರಣ್ಯ ಪ್ರದೇಶದಲ್ಲಿ ನಾಪತ್ತೆ ಆಗಿದ್ದರು. ಗ್ರಾಮಸ್ಥರ ಸಹಕಾರದಿಂದ ಅರಣ್ಯ ಪ್ರದೇಶದಲ್ಲಿ ಹುಡುಕಿದಾಗ ಅವರು ಸಿಗಲಿಲ್ಲ. ನಂತರ ಮನೆಯೊಂದರ ಬಳಿ ಆರೋಪಿಗಳು ರಸ್ತೆ ಕುರಿತು ವಿಚಾರಿಸಿದಾಗ ಆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಆಗ ಸ್ಥಳಕ್ಕೆ ತೆರಳಿದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಅವರನ್ನು ಬ್ರಹ್ಮಾವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಭಯೋತ್ಪಾದನೆ ನಿಗ್ರಹಿಸಲು ಕೇಂದ್ರಕ್ಕೆ ಕಾಂಗ್ರೆಸ್ ಎಲ್ಲ ರೀತಿಯ ಸಹಕಾರ – ವಿನಯ ಕುಮಾರ್ ಸೊರಕೆ

 


ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಹಿಳಾ ಕಾಂಗ್ರೆಸ್ ಸಮಿತಿ ಹಾಗೂ ಯುವ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಹಾಗೂ ಈ ದುರ್ಘಟನೆಯಲ್ಲಿ ಬಲಿಯಾದವರಿಗೆ ಉಡುಪಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಶುಕ್ರವಾರ ಮೇಣದ ಬತ್ತಿ ಹೊತ್ತಿಸಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು

ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಇದೊಂದು ಹೇಯ ಕೃತ್ಯ. ಇಡೀ ದೇಶವೇ ನೋವಿನಲ್ಲಿ ಮುಳುಗಿದೆ. ಭಯೋತ್ಪಾದಕರಿಗೆ ಜಾತಿ, ಧರ್ಮ ಎಂಬುದು ಇಲ್ಲ. ಈ ಕೃತ್ಯವನ್ನು ಇಡೀ ದೇಶದ ಎಲ್ಲ ವರ್ಗದ ಜನರು ಒಕ್ಕೋರಲಿನಿಂದ ಖಂಡಿಸಿದ್ದಾರೆ. ಭಯೋತ್ಪಾದನೆ ಧಮನ ಮಾಡಲು ಕೇಂದ್ರ ಸರಕಾರ ಎಲ್ಲ ರೀತಿಯ ಸಹಕಾರ ವನ್ನು ಕಾಂಗ್ರೆಸ್ ನೀಡುತ್ತಿದೆ. ಇದಕ್ಕೆ ಸರಿಯಾದ ಪ್ರತ್ಯುತ್ತರವನ್ನು ಸರಕಾರ ನೀಡ ಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್ ಮಾತನಾಡಿ, ದ್ವೇಷದ ಆಡಳಿತದಿಂದ ಯಾವುದೇ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಇಲ್ಲ. ಪ್ರೀತಿಯ ಆಡಳಿತದಿಂದ ಮಾತ್ರ ಈ ದೇಶ ಪ್ರಗತಿ ಕಾಣಲು ಸಾಧ್ಯ. ಈ ದುರ್ಘಟನೆ ಯಿಂದ ಭಾರತೀಯರೇ ಈ ದೇಶದಲ್ಲಿ ಭಯದಲ್ಲಿ ಬದುಕುವ ವಾತಾವಣ ನಿರ್ಮಾಣವಾಗಿದೆ. ಕಾಶ್ಮೀರದಿಂದ ಆರ್ಟಿಕಲ್ 370 ರದ್ದು ಮಾಡಿದರೂ ಇನ್ನೂ ಶಾಂತಿ ನೆಲೆಸಿಲ್ಲ. ಭಯೋತ್ಪಾದನೆ ವಿಚಾರದಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಮಮತಾ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಜ್ಜನ್ ಶೆಟ್ಟಿ, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ನಾಗೇಶ್ ಕುಮಾರ್ ಉದ್ಯಾವರ, ಜ್ಯೋತಿ ಹೆಬ್ಬಾರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಸರ್ಫುದ್ದೀನ್ ಮೊದಲಾದವರು ಉಪಸ್ಥಿತರಿದ್ದರು

© all rights reserved
made with by templateszoo