ಮಣಿಪಾಲ: ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುತ್ತಿದ್ದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಣ್ಣೂರು ನಿವಾಸಿ ಶೋಹೈಲ್ ನೀಲಾಕತ್ (26) ಬಂಧಿತ ಆರೋಪಿ.
ಕಳೆದ ಆಗಸ್ಟ್ 11, 2025ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೀಲಿ ಬಣ್ಣದ ಕಾರನ್ನು ಸಂಪೂರ್ಣ ಟಿಂಟ್ ಅಳವಡಿಸಿಕೊಂಡು ಉಡುಪಿಯಿಂದ ಹಿರಿಯಡ್ಕದ ಕಡೆಗೆ ಅತಿ ವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ. ಇದರಿಂದ ರಸ್ತೆಯಲ್ಲಿದ್ದ ದ್ವಿಚಕ್ರ ವಾಹನಗಳು ಮತ್ತು ಇತರ ವಾಹನಗಳಿಗೆ ಅಪಘಾತ ಸಂಭವಿಸುವ ಅಪಾಯವಿತ್ತು. ಅಲ್ಲದೆ, ಕಾರು ವಿಪರೀತ ಕರ್ಕಶ ಶಬ್ದ ಮಾಡುತ್ತಿತ್ತು.
ಈ ವರ್ತನೆಯಿಂದ ಅನುಮಾನಗೊಂಡ ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕ ವಿವೇಕಾನಂದ ಬಿ. ಅವರು ತಮ್ಮ ಸಿಬ್ಬಂದಿಯೊಂದಿಗೆ ಕಾರನ್ನು ಹಿಂಬಾಲಿಸಿದರು. ಕೊನೆಗೆ, ಎಂಐಟಿ ಜಂಕ್ಷನ್ ಬಳಿ ಕಾರನ್ನು ತಡೆದು ವಶಕ್ಕೆ ಪಡೆದರು. ಕಾರಿನ ಚಾಲಕ ಶೋಹೈಲ್ ನೀಲಾಕತ್‌ನನ್ನು ಬಂಧಿಸಲಾಯಿತು.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 143/2025ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125, 292 ಮತ್ತು ಮೋಟಾರು ವಾಹನ ಕಾಯ್ದೆ (IMV Act) ನಿಯಮಗಳ ಪ್ರಕಾರ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ