ರಾಜ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಾಜ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗಣೇಶೋತ್ಸವ, ಈದ್ ಮಿಲಾದ್‌ಗೆ ಡಿಜೆ ನಿರ್ಬಂಧ: ಹೈಕೋರ್ಟ್‌ನಿಂದ ಅರ್ಜಿ ವಜಾ

 


ಬೆಂಗಳೂರು: ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಮೆರವಣಿಗೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿಜೆ ಮತ್ತು ಸೌಂಡ್ ಸಿಸ್ಟಮ್‌ಗಳ ಬಳಕೆಯನ್ನು ನಿಷೇಧಿಸಿ ಬೆಂಗಳೂರು ಪೊಲೀಸರು ಹೊರಡಿಸಿದ್ದ ಸುತ್ತೋಲೆಯನ್ನು ಎತ್ತಿಹಿಡಿಯುವ ಮೂಲಕ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.

ಹೈಕೋರ್ಟ್ ತೀರ್ಪು: ಪೊಲೀಸ್ ಸುತ್ತೋಲೆಗೆ ನ್ಯಾಯಾಂಗದ ಸಹಮತ

ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಆಗಸ್ಟ್ 14ರಂದು ಹೊರಡಿಸಿದ್ದ ಸುತ್ತೋಲೆಯು ಕಾನೂನುಬದ್ಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘಟನೆಯ ಪದಾಧಿಕಾರಿಗಳು ಈ ಸುತ್ತೋಲೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರಿದ್ದ ನ್ಯಾಯಪೀಠ, ಈ ನಿರ್ಬಂಧದಲ್ಲಿ ಯಾವುದೇ ಲೋಪಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಶಬ್ದ ಮಾಲಿನ್ಯ ನಿಯಂತ್ರಣ: ನ್ಯಾಯಾಲಯದ ಪ್ರಮುಖ ಕಾಳಜಿ

ವಸತಿ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿ ಗರಿಷ್ಠ 55 ಡೆಸಿಬಲ್ ಮತ್ತು ರಾತ್ರಿ ಹೊತ್ತಿನಲ್ಲಿ 45 ಡೆಸಿಬಲ್ ಶಬ್ದ ಮಟ್ಟವನ್ನು ಮಾತ್ರ ಅನುಮತಿಸಲಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ಮಾನದಂಡವನ್ನು ಗಮನದಲ್ಲಿಟ್ಟುಕೊಂಡು, ಡಿಜೆ ಮತ್ತು ಧ್ವನಿವರ್ಧಕಗಳ ಬಳಕೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾರೀ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಇಂತಹ ಸಾಧನಗಳ ಬಳಕೆಯನ್ನು ನಿರ್ಬಂಧಿಸುವ ಪೊಲೀಸರ ಕ್ರಮ ಸರಿಯಾಗಿದೆ ಎಂದು ನ್ಯಾಯಪೀಠ ಹೇಳಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವುಗಳ ಬಳಕೆಯನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಡಿಜೆ ಸಂಘಟನೆಯ ವಾದ ಮತ್ತು ಅದಕ್ಕೆ ನ್ಯಾಯಾಲಯದ ಉತ್ತರ

ಡಿಜೆ ಸಂಘಟನೆಯು ತಮ್ಮ ವಾದದಲ್ಲಿ, ಡಿಜೆ ಮತ್ತು ಸೌಂಡ್ ಸಿಸ್ಟಮ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಸಂವಿಧಾನದತ್ತವಾದ ತಮ್ಮ ಮೂಲಭೂತ ವ್ಯಾಪಾರ ಮಾಡುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿತ್ತು. ಜೊತೆಗೆ, ಧ್ವನಿವರ್ಧಕಗಳ ತಯಾರಿಕೆ ಮತ್ತು ಮಾರಾಟಕ್ಕೆ ಅನುಮತಿ ಇರುವಾಗ, ಅವುಗಳ ಬಳಕೆಯನ್ನು ನಿರ್ಬಂಧಿಸುವುದು ಸಮಂಜಸವಲ್ಲ ಎಂದು ವಾದಿಸಿತ್ತು. ಆದರೆ, ಈ ವಾದವನ್ನು ಹೈಕೋರ್ಟ್ ಪುರಸ್ಕರಿಸಿಲ್ಲ. ಶಬ್ದ ಮಾಲಿನ್ಯವು ಸಾರ್ವಜನಿಕ ಆರೋಗ್ಯ ಮತ್ತು ಶಾಂತಿಗೆ ಗಂಭೀರ ಅಪಾಯ ತಂದೊಡ್ಡುವುದರಿಂದ, ಅದನ್ನು ನಿಯಂತ್ರಿಸುವ ಸರ್ಕಾರದ ಕ್ರಮಗಳು ನ್ಯಾಯಸಮ್ಮತವಾಗಿವೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ. 

ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣ: 'ಮಾಸ್ಕ್ ಮ್ಯಾನ್' ಚಿನ್ನಯ್ಯ ಅರೆಸ್ಟ್

 


ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, `ಮಾಸ್ಕ್ ಮ್ಯಾನ್' ಎಂದೇ ಗುರುತಿಸಿಕೊಂಡಿದ್ದ ಚಿನ್ನಯ್ಯನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆಗಾಗಿ ಬೆಳ್ತಂಗಡಿಯ ವಿಶೇಷ ತನಿಖಾ ತಂಡದ (SIT) ಕಚೇರಿಯಿಂದ ತಾಲ್ಲೂಕು ಆಸ್ಪತ್ರೆಗೆ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕರೆದೊಯ್ದು, ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಸುಮಾರು 19 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಆತ ಹಲವು ಪ್ರಮುಖ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಚಿನ್ನಯ್ಯ ಹೆಸರಿಸಿರುವ ವ್ಯಕ್ತಿಗಳನ್ನು ವಿಚಾರಣೆಗಾಗಿ ಕರೆಸುವ ಸಾಧ್ಯತೆ ಇದೆ.

ಆರೋಪಿ ಚಿನ್ನಯ್ಯ, ತಾನು 2014ರ ನಂತರ ತಮಿಳುನಾಡಿನಲ್ಲಿದ್ದೆ ಮತ್ತು 2023ರಲ್ಲಿ ಮೂವರ ಗುಂಪೊಂದು ತನ್ನನ್ನು ಇಲ್ಲಿಗೆ ಕರೆತಂದು ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಿತ್ತು ಎಂದು ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ. ಈ ಮೊದಲು, ತಾನು ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿ ಸಂಚಲನ ಮೂಡಿಸಿದ್ದ. ಆದರೆ ಈಗ ತನ್ನ ಹೇಳಿಕೆಯಿಂದ ಯೂ ಟರ್ನ್ ಹೊಡೆದಿದ್ದಾನೆ. ಆದರೂ, ಆತ ಕಳೆದೊಂದು ತಿಂಗಳಿನಿಂದ ಉತ್ಖನನ ಕಾರ್ಯಕ್ಕೆ ಸಂಬಂಧಿಸಿದಂತೆ ಹಲವು ಕಡೆಗಳಲ್ಲಿ ಓಡಾಡಿದ್ದ. ಸದ್ಯ, ಆತನ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ

ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ, ವೈದ್ಯಕೀಯ ಪ್ರಮಾಣಪತ್ರ ಪಡೆದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಎಸ್ಐಟಿ ಚಿನ್ನಯ್ಯನನ್ನು ತಮ್ಮ ವಶಕ್ಕೆ ಕೇಳುವ ಸಾಧ್ಯತೆ ಹೆಚ್ಚಿದೆ.

ಧರ್ಮಸ್ಥಳಕ್ಕೆ ನರಮಂಡಲ ತರಲು ಹೇಳಿದ ಮೂವರ ಹೆಸರನ್ನು `ಮಾಸ್ಕ್ ಮ್ಯಾನ್' ಚಿನ್ನಯ್ಯ ಬಹಿರಂಗಪಡಿಸಿದ್ದು, ಪೊಲೀಸರು ಮತ್ತು ಎಸ್ಐಟಿ ತಂಡ ಈ ಕುರಿತು ಆಳವಾದ ತನಿಖೆ ನಡೆಸಲಿದೆ. ನೂರಾರು ಶವಗಳಲ್ಲಿ ಶೇಕಡಾ 90ರಷ್ಟು ಮಹಿಳೆಯರು, ಯುವತಿಯರು ಮತ್ತು ಬಾಲಕಿಯರ ಶವಗಳಿದ್ದವು, ಮತ್ತು 15 ವರ್ಷದ ಬಾಲಕಿಯೊಬ್ಬಳ ದೇಹದಲ್ಲಿ ಲೈಂಗಿಕ ದೌರ್ಜನ್ಯದ ಗಾಯಗಳಿದ್ದವು ಎಂದು ಈ ಹಿಂದೆ ಚಿನ್ನಯ್ಯ ಹೇಳಿಕೆ ನೀಡಿದ್ದ. ಈಗ ಆತನ ಬಂಧನವು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ರದ್ದು; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಧರ್ಮಸ್ಥಳ ಪ್ರಕರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಸಭಾಧ್ಯಕ್ಷರಿಗೆ ಮನವಿ ಮಾಡಲಾಗಿದೆ : ಶಾಸಕ ಸುನೀಲ್ ಕುಮಾರ್


 ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ವರ್ಷದ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಜಿಪಿಆರ್ ಮೂಲಕ ಅಸ್ತಿಪಂಜರ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.ಅಲ್ಲದೆ ಈ ಒಂದು ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕೂಡ ಎಂಟ್ರಿ ಕೊಟ್ಟಿದ್ದು, ಎಸ್‌ಐಟಿ ಅಧಿಕಾರಿಗಳಿಂದ ಹಾಗೂ ಪೊಲೀಸರಿಂದ ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ.

ಅಲ್ಲದೆ ಸುಮೋಟೋ ಕೇಸ್ ಕೂಡ ದಾಖಲಿಸಿಕೊಂಡಿದೆ.ಈ ವಿಚಾರವಾಗಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡಲು ಸದನದಲ್ಲಿ ಪ್ರಸ್ತಾಪ ಮಾಡಲು ಸ್ಪೀಕರ್ಗೆ ಅವಕಾಶ ಕೇಳಿದ್ದೇವೆ. ಧರ್ಮಸ್ಥಳ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ಕೊಡುತ್ತೇವೆ ಇಂದು ಸಭಾಧ್ಯಕ್ಷರು ಹೇಳಿದ್ದಾರೆ ಇವತ್ತು ಅವಕಾಶ ಕೊಟ್ಟರೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ಬೆಂಗಳೂರಲ್ಲಿ ಸುನೀಲ್ ಕುಮಾರ್ ತಿಳಿಸಿದರು.

ಆಗಸ್ಟ್ 5 ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರಿಕೆ: ಹವಾಮಾನ ಇಲಾಖೆ ಮುನ್ಸೂಚನೆ


ಬೆಂಗಳೂರು: ರಾಜ್ಯದಲ್ಲಿ ಭಾನುವಾರದಿಂದ ಆರಂಭವಾಗಿರುವ ಮಳೆಯು ಇನ್ನು ಮೂರು ದಿನಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ 5 ರಿಂದ ಆಗಸ್ಟ್ 7 ರ ವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ 7ರವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಂಭವವಿದ್ದು, ಆದ್ದರಿಂದ ಆಗಸ್ಟ್ 4 ರಿಂದ 7 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಯಾವ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್?

 * ಆಗಸ್ಟ್ 5 ರಂದು: ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು, ಮತ್ತು ದಕ್ಷಿಣ ಒಳನಾಡಿನ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

 * ಆಗಸ್ಟ್ 6 ಮತ್ತು 7 ರಂದು: ಕರಾವಳಿಯ ಮೂರು ಜಿಲ್ಲೆಗಳ ಜೊತೆಗೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ಈ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇನ್ನು, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಮಳೆಯಾಗಲಿದೆ. ಅದೇ ರೀತಿ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಮತ್ತು ವಿಜಯನಗರ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ


 ನವದೆಹಲಿ: ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಕಾರಣಗಳನ್ನು ಮುಂದಿಟ್ಟು ಜುಲೈ 21, 2025 ರಂದು ಅವರು ತಮ್ಮ ಪದತ್ಯಾಗ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿರುವ ಧನಕರ್, ಸಂವಿಧಾನದ 67(ಎ) ವಿಧಿಯ ಅಡಿಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಉಲ್ಲೇಖಿಸಿದ್ದಾರೆ. ವೈದ್ಯಕೀಯ ಸಲಹೆಯ ಮೇರೆಗೆ ತಮ್ಮ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಅವರು ಪತ್ರದಲ್ಲಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

2022ರ ಆಗಸ್ಟ್ 11 ರಂದು ಭಾರತದ 14ನೇ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದ ಜಗದೀಪ್ ಧನಕರ್ ಅವರು, ರಾಜ್ಯಸಭೆಯ ಸಭಾಪತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಅವರ ಅಧಿಕಾರಾವಧಿ 2027ರ ಆಗಸ್ಟ್‌ವರೆಗೆ ಇತ್ತು. ರಾಜಸ್ಥಾನ ಮೂಲದವರಾದ ಧನಕರ್, ಉಪರಾಷ್ಟ್ರಪತಿಯಾಗುವ ಮುನ್ನ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ಧನಕರ್ ಅವರ ಅನಿರೀಕ್ಷಿತ ರಾಜೀನಾಮೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅವರ ಮುಂದಿನ ನಡೆ ಹಾಗೂ ತೆರವಾದ ಉಪರಾಷ್ಟ್ರಪತಿ ಹುದ್ದೆಗೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಇದೀಗ ಎಲ್ಲೆಡೆ ಮೂಡಿದೆ.

ಮುಡಾ ಹಗರಣ: ಸಿಎಂ ಪತ್ನಿ, ಸಚಿವರಿಗೆ ಸುಪ್ರೀಂ ಕೋರ್ಟ್‌ ರಿಲೀಫ್; ಇಡಿಗೆ ತೀವ್ರ ತರಾಟೆ


ನವದೆಹಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿದ್ದ ತನಿಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಶ್ರೀಮತಿ ಪಾರ್ವತಿ ಸಿದ್ದರಾಮಯ್ಯ ಹಾಗೂ ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಭಾರಿ ರಿಲೀಫ್ ನೀಡಿದೆ. ಇಡಿ ನೀಡಿದ್ದ ಸಮನ್ಸ್‌ ಅನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.

ಇಡಿಗೆ ಸುಪ್ರೀಂ ಕೋರ್ಟ್‌ನ ಚಾಟಿ

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು, ಅರ್ಜಿಯ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ರಾಜಕೀಯ ಪ್ರೇರಿತ ಉದ್ದೇಶಗಳಿಗೆ ತನಿಖಾ ಸಂಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

"ದಯವಿಟ್ಟು ನಮ್ಮ ಬಾಯಿ ತೆರೆಯುವಂತೆ ಮಾಡಬೇಡಿ. ಒಂದು ವೇಳೆ ನಾವು ಮಾತನಾಡಿದರೆ, ಜಾರಿ ನಿರ್ದೇಶನಾಲಯದ ಬಗ್ಗೆ ಕೆಲವು ಕಠಿಣ ಟೀಕೆಗಳನ್ನು ಮಾಡಬೇಕಾಗುತ್ತದೆ. ದುರದೃಷ್ಟವಶಾತ್, ನನಗೆ ಮಹಾರಾಷ್ಟ್ರದಲ್ಲಿ ಇಂತಹ ಕೆಲವು ಅನುಭವಗಳಿವೆ. ದೇಶಾದ್ಯಂತ ಇದೇ ರೀತಿಯ ವರ್ತನೆಯನ್ನು ನೀವು ಮುಂದುವರಿಸಬಾರದು" ಎಂದು ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಿಗೆ ಸಿಜೆಐ ಗವಾಯಿ ಖಾರವಾಗಿ ನುಡಿದರು.

"ರಾಜಕೀಯ ಪೈಪೋಟಿಯನ್ನು ಮತದಾರರ ಮುಂದೆ ನಡೆಸಲಿ. ಅದಕ್ಕೆ ಜಾರಿ ನಿರ್ದೇಶನಾಲಯವನ್ನು ಏಕೆ ಬಳಸಲಾಗುತ್ತಿದೆ?" ಎಂದು ಪೀಠವು ಪ್ರಶ್ನಿಸಿತು. ಈ ಕಠಿಣ ನಿಲುವಿನ ಬಳಿಕ, ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ತೀರ್ಪಿನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿ, ಇಡಿಯ ಅರ್ಜಿಯನ್ನು ವಜಾಗೊಳಿಸಿತು.

ಪ್ರಕರಣದ ಹಿನ್ನೆಲೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಿ, ಪತ್ನಿ ಪಾರ್ವತಿ ಅವರ ಹೆಸರಿಗೆ ಮುಡಾದಿಂದ ಅಕ್ರಮವಾಗಿ 14 ನಿವೇಶನಗಳನ್ನು ಮಂಜೂರು ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಪ್ರತ್ಯೇಕ ತನಿಖೆ ಆರಂಭಿಸಿ, ಶ್ರೀಮತಿ ಪಾರ್ವತಿ ಸಿದ್ದರಾಮಯ್ಯ ಹಾಗೂ ಸಚಿವ ಭೈರತಿ ಸುರೇಶ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿತ್ತು.

ಹೈಕೋರ್ಟ್‌ನಿಂದ ಸಿಕ್ಕಿದ್ದ ರಿಲೀಫ್

ಇಡಿ ಸಮನ್ಸ್‌ ಅನ್ನು ಪ್ರಶ್ನಿಸಿ ಪಾರ್ವತಿ ಸಿದ್ದರಾಮಯ್ಯ ಮತ್ತು ಭೈರತಿ ಸುರೇಶ್‌ ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ನಡೆಯುತ್ತಿರುವಾಗ, ಇಡಿ ಸಮಾನಾಂತರ ತನಿಖೆ ನಡೆಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು, ಸಮನ್ಸ್‌ ಅನ್ನು ರದ್ದುಗೊಳಿಸಿತ್ತು. ಶ್ರೀಮತಿ ಪಾರ್ವತಿ ಅವರು ಈಗಾಗಲೇ ನಿವೇಶನಗಳನ್ನು ಪ್ರಾಧಿಕಾರಕ್ಕೆ ಹಿಂದಿರುಗಿಸಿದ್ದು, ಯಾವುದೇ 'ಅಪರಾಧದ ಆದಾಯ' ಹೊಂದಿಲ್ಲ ಎಂಬುದನ್ನು ಹೈಕೋರ್ಟ್ ಪರಿಗಣಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಇಡಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದು, ಇಡಿಯ ಅರ್ಜಿಯನ್ನು ವಜಾಗೊಳಿಸಿರುವುದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಮತ್ತು ಸಚಿವ ಭೈರತಿ ಸುರೇಶ್ ಅವರಿಗೆ ಬಹುದೊಡ್ಡ ಕಾನೂನಾತ್ಮಕ ಗೆಲುವು ಸಿಕ್ಕಂತಾಗಿದೆ.

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆ SIT ತನಿಖೆಗೆ ನೀಡಿ ರಾಜ್ಯ ಸರ್ಕಾರ ಆದೇಶ


 ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿರುವುದಾಗಿ ಧರ್ಮಸ್ಥಳ ಪೊಲೀಸ್‌ ಠಾಣೆಗೆ ವ್ಯಕ್ತಿಯೊಬ್ಬ ದೂರು ನೀಡಿ ಬೆಳ್ತಂಗಡಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ ಸಂಬಂಧ ಇದೀಗ ವಿಶೇಷ ತನಿಖಾ ತಂಡ(SIT) ಕ್ಕೆ ವರ್ಗಾಯಿಸಿ ಜುಲೈ 19 ರಂದು ಮಾನ್ಯ ಕರ್ನಾಟಕ ಸರ್ಕಾರವು ಆದೇಶಿಸಿದೆ.

ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ತಿಳಿಸಿದ್ದಾರೆ.

ವಿಶೇಷ ತನಿಖಾ ಸಂಸ್ಥೆ(SIT) ಯ ಮುಖ್ಯಸ್ಥರಾಗಿ ಐಪಿಎಸ್ ಪ್ರಣವ ಮೋಹಾಂತಿ ಹಾಗೂ ಸದಸ್ಯರಾಗಿ ಐಪಿಎಸ್ ಗಳಾದ ಎಂ.ಎನ್.ಅನುಚೇತ್, ಸೌಮ್ಯಲತ, ಜಿತೇಂದ್ರ ಕುಮಾ‌ರ್ ದಯಾಮ ರವರನ್ನು ಸರಕಾರ ನೇಮಿಸಿದೆ.



ಧರ್ಮಸ್ಥಳ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲು: ದ.ಕ. ಜಿಲ್ಲಾ ಎಸ್ಪಿ ಅರುಣ್ ಕುಮಾರ್

 


ಮಂಗಳೂರು: ಧರ್ಮಸ್ಥಳದಲ್ಲಿ ಈ ಹಿಂದೆ ನಡೆದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.

ಈ ಹಿಂದೆಯೇ ಧರ್ಮಸ್ಥಳದಲ್ಲಿ ಹಲವು ಅಪರಾಧ ಕೃತ್ಯಗಳು ನಡೆದಿದೆ. ತನಗೆ ಜೀವ ಬೆದರಿಕೆ ಒಡ್ಡಿ ಈ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ. ಪ್ರಸಕ್ತ ತನಗೆ ಪಾಪಪ್ರಜ್ಞೆ ಕಾಡುತ್ತಿದೆ. ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ತಾನು ಸಿದ್ಧವಿರುವುದಾಗಿ ದೂರುದಾರರು ತಿಳಿಸಿದ್ದಾರೆ. ಗುರುವಾರ ತನ್ನ ಕಚೇರಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಈ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿದೆ. ದೂರುದಾರರು ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿಡುವಂತೆ ವಿನಂತಿಸಿಕೊಂಡ ಮೇರೆಗೆ ಅವರ ಬಗ್ಗೆ ಮಾಹಿತಿಯನ್ನು ನೀಡಲಾಗುವುದಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.

ಈ ದೂರಿನ ಬಗ್ಗೆ ನ್ಯಾಯಾಲಯದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:39/2025, ಕಲಂ:211()ಬಿಎನ್‌ಎಸ್ ಕಾಯ್ದೆಯಡಿ ಗುರುವಾರ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ| ಮುಂದಿನ ೬ ದಿನಗಳ‌ ಕಾಲ ಭಾರೀ ಮಳೆ ಸಾಧ್ಯತೆ| ವಿವಿಧ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

 


ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ(ಮೇ 19) ಸತತವಾಗಿ ಆರು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ. ಬೀಸಲಿದ್ದು, ಬಹುತೇಕ ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ.

ಮೇ 19ರಂದು ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಮತ್ತು ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಹಾಸನ, ಕೋಲಾರ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮೇ 20ರಂದು ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮೇ 21ರಿಂದ 24ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಟೆಸ್ಟ್ ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ನಿವೃತ್ತಿ

 

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಇತ್ತೀಚಿಗೆ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಸುದ್ದಿ ಇನ್ನು ಅಭಿಮಾನಿಗಳ ಮನದಲ್ಲಿ ಹಸಿರಾಗಿರುವಾಗಲೇ, ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಈ ಸುದ್ದಿ ಅಭಿಮಾನಿಗಳಿಗೆ ತೀವ್ರ ಆಘಾತವನ್ನು ಉಂಟು ಮಾಡಿದೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಸಹ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ.

ಇತ್ತೀಚಿಗೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿವರತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದರು. ಅಲ್ಲದೆ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಐಪಿಎಲ್‌ ನಡೆಯುತ್ತಿರುವಾಗಲೇ ರೋಹಿತ್ ಶರ್ಮಾ ಅವರ ಈ ನಿರ್ಧಾರ ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಭಾರತ ಇಂಗ್ಲೆಂಡ್‌ ಪ್ರವಾಸವನ್ನು ಆರಂಭಿಸುವ ಮುನ್ನ ರೋಹಿತ್‌ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಈಗ ವಿರಾಟ್‌ ಸಹ ಇದೇ ಹಾದಿ ತುಳಿದಂತೆ ಕಾಣುತ್ತಿದೆ.

ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲ
ವರದಿಗಳ ಅನುಸಾರ ಇಂಗ್ಲೆಂಡ್‌ ಪ್ರವಾಸಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಭಾರತ ತಂಡವನ್ನು ಪ್ರಕಟಿಸಬೇಕಾಗುತ್ತದೆ. ಇದೇ ವೇಳೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಂತಹ ಅನುಭವಿ ಆಟಗಾರರು ತಂಡಕ್ಕೆ ಅಲಭ್ಯರಾದಲ್ಲಿ ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ. ಇನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಟೀಕೆಗೆ ಗುರಿಯಾಗಿದ್ದರು. ಆಗಿನಿಂದಲೂ ವಿರಾಟ್‌ ಇತಂಹದೊಂದು ನಿರ್ಧಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ವಿರಾಟ್‌ ಕೊಹ್ಲಿ ಸಾಧನೆ
ವಿರಾಟ್ ಕೊಹ್ಲಿ 123 ಟೆಸ್ಟ್‌ ಪಂದ್ಯಗಳಲ್ಲಿ 9230 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 46 ಆಗಿದೆ. ಒಟ್ಟಾರೆ ವಿರಾಟ್‌ 30 ಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ.


ದೇಶದಾದ್ಯಂತ ಹೈಅಲರ್ಟ್: 24 ಏರ್ಪೋರ್ಟ್‌ಗಳು ತಾತ್ಕಾಲಿಕ ಸ್ಥಗಿತ


ನವದೆಹಲಿ: ಪಾಕಿಸ್ತಾನ ಕ್ಷಪಣಿ ದಾಳಿ ನಡೆಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ದೇಶಾದ್ಯಂತ 24 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಹಲವು ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣದ ಸಲಹೆಗಳನ್ನು ನೀಡಿದ್ದು, ಅದಕ್ಕೆ ಅನುಗುಣವಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಯನ್ನು ಮಾಡಿಕೊಳ್ಳುವಂತೆ ತಿಳಿಸಿವೆ.

ದೇಶಾದ್ಯಂತ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ.

ದೇಶದ ರಾಜಧಾನಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಭದ್ರತೆ ಹೆಚ್ಚಿಸಿರುವ ಕಾರಣ ಕೆಲವು ವಿಮಾನಗಳ ಹಾರಾಟಗಳು ರದ್ದಾಗಿವೆ. ಪ್ರಯಾಣಿಕರು ತಮ್ಮ ವಿಮಾನಯಾನದ ಬಗ್ಗೆ ಮಾಹಿತಿ ತಿಳಿದುಕೊಂಡು ಏರ್‌ಪೋರ್ಟ್‌ಗೆ ಬರಲು ಸೂಚಿಸಲಾಗಿದೆ.


ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಕಲಬುರಗಿಗೆ ಕೊನೆ ಸ್ಥಾನ


ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು (ಮೇ 02) ಎಸ್‌ಎಸ್‌ಎಲ್‌ಸಿ ಪರೀಕ್ಷೆ -1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟಾರೆ ಶೇ. 66.14 ಮಕ್ಕಳು ತೇರ್ಗಡೆಯಾಗಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ದಕ್ಷಿಣ ಕನ್ನಡ (91.12%) ಹಾಗೂ ಉಡುಪಿ ಜಿಲ್ಲೆ(89.96%) ಹಾಗೂ ಉತ್ತರ ಕನ್ನಡ ಜಿಲ್ಲೆಗೆ(83.19%) ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಸಿಕ್ಕಿದೆ. ಕಲಬುರಗಿ ಜಿಲ್ಲೆಗೆ ರಾಜ್ಯದಲ್ಲಿ ಕೊನೆ ಸ್ಥಾನ ದೊರೆತಿದೆ.

ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಇಂದು ಬೆಳಗ್ಗೆ 11.30ಕ್ಕೆ ಮಂಡಳಿಯ ಅಧಿಕಾರಿಗಳ ಜತೆ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶವನ್ನು ಪ್ರಕಟಿಸಿದರು. ಮಂಡಳಿಯ ವೆಬ್‌ಸೈಟ್ https://karresults.nic.in ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಈ ಬಾರಿ 22 ವಿದ್ಯಾರ್ಥಿಗಳುನ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.

ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕರ್ನಾಟಕದಾದ್ಯಂತ 15,881 ಪ್ರೌಢಶಾಲೆಗಳಿಂದ 4,61,563 ಹುಡುಗರು ಮತ್ತು 4,34,884 ಹುಡುಗಿಯರು ಪರೀಕ್ಷೆಗೆ ದಾಖಲಾಗಿದ್ದರು

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 8.9 ಲಕ್ಷ ವಿದ್ಯಾರ್ಥಿಗಳು ಕರ್ನಾಟಕ ಮಂಡಳಿಯ 10 ನೇ ತರಗತಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅವರಲ್ಲಿ 4.5 ಲಕ್ಷ ಹುಡುಗರು ಮತ್ತು 4.3 ಲಕ್ಷ ಹುಡುಗಿಯರು ವಾರ್ಷಿಕ ಮಂಡಳಿ ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಉತ್ತೀರ್ಣ ಶೇಕಡಾವಾರು 73.40 ರಷ್ಟಿತ್ತು, ಇದು 2023 ರಲ್ಲಿ 83.89 ಪ್ರತಿಶತ ಮತ್ತು 2022 ರಲ್ಲಿ 85.13 ಪ್ರತಿಶತದಿಂದ ಕಡಿಮೆಯಾಗಿದೆ.


ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; "ಉಡುಪಿ ಫಸ್ಟ್"; ದ.ಕ ದ್ವಿತೀಯ

 

ಬೆಂಗಳೂರು, ಏಪ್ರಿಲ್ 8: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಈ ಬಾರಿ ಒಟ್ಟಾರೆ ಶೇಕಡಾ 73.45 ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಇಳಿಕೆ ಕಂಡುಬಂದಿದೆ.
ಇಲಾಖೆಯ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಫಲಿತಾಂಶವು ಮಧ್ಯಾಹ್ನ 1.30 ರ ನಂತರ ಇಲಾಖೆಯ ಅಧಿಕೃತ ಜಾಲತಾಣಗಳಾದ karresults.nic.in ಮತ್ತು kseab.karnataka.gov.in ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಬಾರಿಯ ಫಲಿತಾಂಶದಲ್ಲಿಯೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಲಿಂಗವಾರು ಫಲಿತಾಂಶದ ವಿವರಗಳನ್ನು ಇಲಾಖೆ ಶೀಘ್ರದಲ್ಲೇ ಪ್ರಕಟಿಸಲಿದೆ.
ರಾಜ್ಯದ ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆಯು ಅತ್ಯುತ್ತಮ ಸಾಧನೆ ತೋರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯು ದ್ವಿತೀಯ ಸ್ಥಾನವನ್ನು ಗಳಿಸಿದೆ. 

ಈ ಬಾರಿ ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ರಾಜ್ಯಾದ್ಯಂತ ಒಟ್ಟು 7 ಲಕ್ಷದ 13 ಸಾವಿರದ 862 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.
ಫಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಲು ಮತ್ತು ಅಂಕಪಟ್ಟಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮರು ಮೌಲ್ಯಮಾಪನ ಮತ್ತು ಪೂರಕ ಪರೀಕ್ಷೆಗಳ ಕುರಿತಾದ ಮಾಹಿತಿಯನ್ನು ಇಲಾಖೆ ಪ್ರಕಟಿಸಲಿದೆ.

ಬೆಲೆ ಏರಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯದಾದ್ಯಂತ ಹೋರಾಟ: 2ರಿಂದ ಅಹೋರಾತ್ರಿ ಧರಣಿ

 


ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಏಪ್ರಿಲ್ 2ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ಸಾಮಾನ್ಯ ಜನರಿಗೆ ಸಿಕ್ಕಿರುವ ಏಕೈಕ ಖಾತರಿ ಬೆಲೆ ಏರಿಕೆ… ಈ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತಿದ್ದಾರೆ" ಎಂದು ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.

ಬೆಲೆ ಏರಿಕೆ ವಿರುದ್ಧ ಏಪ್ರಿಲ್ 2ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 5 ರಂದು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 7 ರಂದು ನಾವು ಮೈಸೂರಿನಿಂದ 'ಜನ ಆಕ್ರೋಶ ಯಾತ್ರೆ' ನಡೆಸಲಿದ್ದೇವೆ… ಪಕ್ಷದ ಎಲ್ಲಾ ನಾಯಕರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ" ಎಂದು ಅವರು ಹೇಳಿದರು. ಎಸ್ಸಿ ಮತ್ತು ಎಸ್ಟಿ ಸಮುದಾಯಗಳನ್ನು ನಿರ್ಲಕ್ಷಿಸುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ಸಮುದಾಯವನ್ನು ಓಲೈಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.

ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಬಜೆಟ್ ನೀಡಿಲ್ಲ. ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ಎಲ್ಲವನ್ನೂ ಹೇಳುತ್ತಾರೆ ಆದರೆ ಎಲ್ಲಾ ಹಿಂದೂ ಸಮುದಾಯಗಳನ್ನು ನಿರ್ಲಕ್ಷಿಸುತ್ತಾರೆ. ಸಿದ್ದರಾಮಯ್ಯ ಅವರು ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು. 


ಜನಸಾಮಾನ್ಯರಿಗೆ ಬಿಗ್ ಶಾಕ್: ನಂದಿನಿ ಹಾಲಿನ ದರ ಲೀಟರ್‌ಗೆ 4ರೂ ಏರಿಕೆ

 


ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿಹೋಗಿರುವ ಗ್ರಾಹಕರಿಗೆ ಸರ್ಕಾರ ಇಂದು ಮತ್ತೆ ಬಿಗ್ ಶಾಕ್ ನೀಡಿದೆ. ನಂದಿನಿ ಪ್ಯಾಕೆಟ್ ಹಾಲಿನ ದರ ಪ್ರತಿಲೀಟರ್ ಗೆ 4 ರೂಪಾಯಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಿಸಿ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ನಂದಿನಿ ಹಾಲಿನ ದರ ಹೆಚ್ಚಿಸಿ ಇನ್ನೂ ವರ್ಷವಾಗಿಲ್ಲ. ಆಗಲೇ ದರ ಏರಿಕೆಗೆ ಪ್ರಸ್ತಾಪ ಬಂದಿತ್ತು. ಕೆಎಂಎಫ್ ಅಧಿಕಾರಿಗಳ ಜೊತೆ ಮೂರು ದಿನಗಳ ಹಿಂದೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಲಿ ದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. 

ಬಿಜೆಪಿಯಿಂದ 6 ವರ್ಷ ಶಾಸಕ ಯತ್ನಾಳ್ ಉಚ್ಛಾಟನೆ

 


ವಿಜಯಪುರ ಶಾಸಕ, ಹಿಂದು ಹುಲಿ ಎಂದೇ ಖ್ಯಾತಿ ಪಡೆದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. 

ರಾಜ್ಯಾಧ್ಯಕ್ಷರ ವಿರುದ್ಧ ಅವಹೇಳನ ಮತ್ತು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದರಿಂದ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.

ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ನಾಲಿಗೆ ಹರಿಬಿಟ್ಟು ಅವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರು. ಜೊತೆಗೆ, ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದರು. ಹೀಗಾಗಿ, ಬಿಜೆಪಿ ಹೈಕಮಾಂಡ್‌ನಿಂದ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.

ಅದಕ್ಕೆ ಉತ್ತರವನ್ನೂ ಕೊಟ್ಟಿದ್ದರು. ಇದೀಗ ದೆಹಲಿ ಬಿಜೆಪಿ ಹೈಕಮಾಂಡ್‌ಗೆ ಯತ್ನಾಳ್ ಅವರಿಗೆ ನೀಡಿದ್ದ ಶೋಕಾಸ್ ನೋಟಿಸ್ ನ ಉತ್ತರ ತೃಪ್ತಿದಾಯಕವಾಗಿರಲಿಲ್ಲ ಎಂದು ಶಾಸಕ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. 

ಇನ್ನು ಅವರ ಶಾಸಕ ಸ್ಥಾನಕ್ಕೂ ಕುತ್ತು ಬರುತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಶಾಸಕ ಸ್ಥಾನದಲ್ಲಿ ಅವರು ಸ್ವತಂತ್ರವಾಗಿ ಮುಂದುವರೆಯಬಹುದು. ಒಂದು ವೇಳೆ ಪಕ್ಷದ ಚಿಹ್ನೆಯಡಿ ಗೆದ್ದಿರುವುದು ತನಗೆ ಬೇಡವೆಂದು ರಾಜೀನಾಮೆ ಕೊಟ್ಟರೆ, ಶಾಸಕ ಸ್ಥಾನ ರದ್ದಾಗಿ ಪುನಃ ಚುನಾವಣೆಗೆ ಹೋಗಬಹುದು.

ಉಚ್ಛಾಟನೆ ಆದೇಶದಲ್ಲಿ ಏನಿದೆ?......

ಪಕ್ಷದ ಕೇಂದ್ರ ಶಿಸ್ತು ಸಮಿತಿಯು 2025 ಫೆಬ್ರವರಿ 10 ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿದೆ ಮತ್ತು ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆ ಮತ್ತು ನಡವಳಿಕೆಯ ಭರವಸೆಗಳನ್ನು ನೀಡಿದ್ದರೂ ಸಹ, ನೀವು ಪಕ್ಷದ ಶಿಸ್ತಿನ್ನು ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ, ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ ಮತ್ತು ನೀವು ಇಲ್ಲಿಯವರೆಗೆ ಹೊಂದಿದ್ದ ಯಾವುದೇ ಪಕ್ಷದ ಹುದ್ದೆಯಿಂದ ನಿಮ್ಮನ್ನು ತೆಗೆದುಹಾಕಲಾಗಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಹನಿಟ್ರ್ಯಾಪ್ ಗದ್ದಲ; ವಿಧಾನಸಭೆಯಿಂದ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ 18 ಬಿಜೆಪಿ ಶಾಸಕರು 6 ತಿಂಗಳು ಸಸ್ಪೆಂಡ್!

 


ಹನಿಟ್ರ್ಯಾಪ್ ಪ್ರಕರಣ ಕುರಿತಂತೆ ಗದ್ದಲ ಎಬ್ಬಿಸಿ, ಸದನದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಬಿಜೆಪಿಯ 18 ಮಂದಿ ಶಾಸಕರನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಆರು ತಿಂಗಳವರೆಗೂ ಅಮಾನತುಗೊಳಿಸಿದ್ದಾರೆ.

ವಿಧಾನಸಭೆಯ ಕಲಾಪದ ವೇಳೆ ಸ್ಪೀಕರ್ ಯುಟಿ ಖಾದರ್ ಅವರ ಪೀಠದ ಎದುರು ಬಜೆಟ್ನ ಪ್ರತಿ ಹರಿದು ಹಾಕುವ ಮೂಲಕ ಸದನದ ಕಲಾಪಕ್ಕೆ ಅಡ್ಡಿ ಮಾಡಿದ್ದು ಹಾಗೂ ಬೇಜವಾಬ್ದಾರಿಯಿಂದ ನಡೆದುಕೊಂಡ ಆರೋಪದಡಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಖಾದರ್ ಅವರು ಆದೇಶಿಸಿದ್ದಾರೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಘೋಷಿಸಿದರು. ಪೀಠಕ್ಕೆ ಅಶಿಸ್ತನ್ನು ತೋರಿದವರನ್ನು ಅಮಾನತು ಮಾಡಲಾಗಿದೆ. ನನಗೆ ಅವಮಾನ ಮಾಡಿದರೆ ಸಹಿಸುವೆ. ಆದರೆ ಪೀಠಕ್ಕೆ ಅಗೌರವ ತೋರಿದ್ದನ್ನು ಸಹಿಸಲ್ಲ ಎಂದು ಖಾದರ್ ಅವರು ಪ್ರತಿಪಾದಿಸಿದರು.

ಸದನದ ನಡಾವಳಿ ವಿರುದ್ಧ ನಡೆದುಕೊಂಡವರನ್ನು ಅಮಾನತು ಮಾಡಬೇಕು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಆಡಳಿತರೂಢ ಸಚಿವರು ಮನವಿ ಮಾಡಿದ್ದರು. ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಭಟಿಸಿದ ಪ್ರತಿಪಕ್ಷದ ನಾಯಕರು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದೂ ಒತ್ತಾಯಿಸಿ ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದರು.

ದೊಡ್ಡನಗೌಡ ಪಾಟೀಲ್ ಸೇರಿಂದತೆ ಮುನಿರತ್ನ ನಾಯ್ಡು, ಅಶ್ವಥ್ ನಾರಾಯಣ, ಎಸ್,ಆರ್,ವಿಶ್ವನಾಥ್, ಭರತ್ ಶೆಟ್ಟಿ, ಶರಣು ಸಲಗಾರ್, ಸಿ.ಕೆ.ರಾಮಮೂರ್ತಿ, ಧೀರಜ್ ಮುನಿರಾಜು, ಯಶ್ ಪಾಲ್ ಸುವರ್ಣಾ, ಉಮಾನಾಥ ಕೊಟ್ಯಾನ್, ಬಿ.ಪಿ ಹರೀಶ್, ಬಿ.ಸುರೇಶ್ ಗೌಡ, ಚನ್ನಬಸವ, ಬಸವರಾಜ ಮತ್ತಿಮಡು, ಭೈರತಿ ಬಸವರಾಜ, ಎಂ.ಆರ್.ಪಾಟೀಲ್, ಚಂದ್ರು ಲಮಾಣಿ, ಬಿ.ಸುರೇಶ್ಗೌಡ ಇನ್ನಿತರರನ್ನು ಸಸ್ಪೆಂಡ್ ಮಾಡಲಾಗಿದೆ.

ಸೌಜನ್ಯ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ, ಸಭೆಗಳನ್ನು ನಡೆಸಬಹುದು: ಹೈಕೋರ್ಟ್‌ ಆದೇಶ


ಸೌಜನ್ಯ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ, ಸಭೆಗಳನ್ನು ನಡೆಸಬಹುದು ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ.

ಮಂಗಳವಾರ ಸಂಜೆ ಎಐಟಿಯುಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆಯನ್ನು ನಿಲ್ಲಿಸುವಂತೆ ಶೇಷಾದ್ರಿಪುರ ಪೊಲೀಸರು ನೀಡಿದ್ದ ನೋಟಿಸ್ ಬಗೆಗಿನ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ನೀಡಿದ್ದಾರೆ.

ಸಾಹಿತಿ-ಚಿಂತಕ- ಹೋರಾಟಗಾರರ ಸಮಾಲೋಚನಾ ಸಭೆಯ ಸಂಚಾಲಕರದಲ್ಲೊಬ್ಬರಾದ ವಿನಯ್ ಶ್ರೀನಿವಾಸ್‌ ಮತ್ತು ವಿಜಯಭಾಸ್ಕರ್ ಪರವಾಗಿ ಹಿರಿಯ ನ್ಯಾಯವಾದಿ ಶ್ರುತಿ ಚಗಂತಿ ರಿಟ್ ಪಿಟೀಷನ್ ಸಲ್ಲಿಸಿದ್ದರು. ರಿಟ್ ಪಿಟೀಷನ್ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್‌ ಎಂ ನಾಗಪ್ರಸನ್ನ "ಪೊಲೀಸರು, ಸರ್ಕಾರ ಸಭೆಯನ್ನು ಪ್ರತಿಭಟನೆಯನ್ನು ಯುವಂತಿಲ್ಲ. ಆದರೆ ಕಾನೂನು ಉಲ್ಲಂಘನೆಯಾದರೆ ಮಾತ್ರ ಪೊಲೀಸರು ಕ್ರಮ ತೆಗೆದುಕೊಳ್ಳಬಹುದು. ಪ್ರತಿಭಟನೆಗಳನ್ನು ಊಹೆಯ ಆಧಾರದಲ್ಲಿ ತಡೆಯುವಂತಿಲ್ಲ" ಎಂದು ಆದೇಶ ನೀಡಿದ್ದಾರೆ.

ಮುಸ್ಲಿಂ ಗುತ್ತಿಗೆದಾರರಿಗೆ 4% ಮೀಸಲಾತಿಗೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಯತ್ನಾಳ್ ಮನವಿ


ಮುಸ್ಲಿಂ ಗುತ್ತಿಗೆದಾರರಿಗೆ ಶೇ.4ರಷ್ಟು ಮೀಸಲಾತಿ ನೀಡುವ ವಿಧೇಯದ ತಿದ್ದುಪಡಿಗೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದಿದ್ದಾರೆ.

ರಾಜ್ಯಪಾಲರಾದ ಥಾವರ್‌ಚಂದ ಗೆಹ್ಲೋಟ್ ಅವರಿಗೆ ವಿವಾದಾತ್ಮಕ ತಿದ್ದುಪಡಿಗೆ ಒಪ್ಪಿಗೆ ನೀಡದಂತೆ ಯತ್ನಾಳ್ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ(ತಿದ್ದುಪಡಿ) ವಿಧೇಯಕ 2025 ಅನ್ನು ಮಂಗಳವಾರ ವಿಧಾನಸಭೆಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಮಂಡಿಸಿದ್ದರು.

ಸದನದಲ್ಲಿ ಈ ವಿಧೇಯಕ ಮಂಡನೆಯಾಗುತ್ತಲೇ ಶಾಸಕ ಯತ್ನಾಳ್ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಸಂವಿಧಾನ ಬಾಹಿರವಾಗಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಒದಗಿಸುವ ಕೆಟಿಪಿಪಿ(ತಿದ್ದುಪಡಿ) ಮಸೂದೆ 2025ರ ವಿವಾದಾತ್ಮಕ ತಿದ್ದುಪಡಿಗಳಿಗೆ ಒಪ್ಪಿಗೆ ನೀಡದಂತೆ ಯತ್ನಾಳ್ ಮನವಿ ಮಾಡಿದ್ದಾರೆ.


© all rights reserved
made with by templateszoo