ಮಂಗಳೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಂಗಳೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗಣೇಶೋತ್ಸವ, ಈದ್ ಮಿಲಾದ್‌ಗೆ ಡಿಜೆ ನಿರ್ಬಂಧ: ಹೈಕೋರ್ಟ್‌ನಿಂದ ಅರ್ಜಿ ವಜಾ

 


ಬೆಂಗಳೂರು: ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಮೆರವಣಿಗೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿಜೆ ಮತ್ತು ಸೌಂಡ್ ಸಿಸ್ಟಮ್‌ಗಳ ಬಳಕೆಯನ್ನು ನಿಷೇಧಿಸಿ ಬೆಂಗಳೂರು ಪೊಲೀಸರು ಹೊರಡಿಸಿದ್ದ ಸುತ್ತೋಲೆಯನ್ನು ಎತ್ತಿಹಿಡಿಯುವ ಮೂಲಕ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.

ಹೈಕೋರ್ಟ್ ತೀರ್ಪು: ಪೊಲೀಸ್ ಸುತ್ತೋಲೆಗೆ ನ್ಯಾಯಾಂಗದ ಸಹಮತ

ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಆಗಸ್ಟ್ 14ರಂದು ಹೊರಡಿಸಿದ್ದ ಸುತ್ತೋಲೆಯು ಕಾನೂನುಬದ್ಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘಟನೆಯ ಪದಾಧಿಕಾರಿಗಳು ಈ ಸುತ್ತೋಲೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರಿದ್ದ ನ್ಯಾಯಪೀಠ, ಈ ನಿರ್ಬಂಧದಲ್ಲಿ ಯಾವುದೇ ಲೋಪಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಶಬ್ದ ಮಾಲಿನ್ಯ ನಿಯಂತ್ರಣ: ನ್ಯಾಯಾಲಯದ ಪ್ರಮುಖ ಕಾಳಜಿ

ವಸತಿ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿ ಗರಿಷ್ಠ 55 ಡೆಸಿಬಲ್ ಮತ್ತು ರಾತ್ರಿ ಹೊತ್ತಿನಲ್ಲಿ 45 ಡೆಸಿಬಲ್ ಶಬ್ದ ಮಟ್ಟವನ್ನು ಮಾತ್ರ ಅನುಮತಿಸಲಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ಮಾನದಂಡವನ್ನು ಗಮನದಲ್ಲಿಟ್ಟುಕೊಂಡು, ಡಿಜೆ ಮತ್ತು ಧ್ವನಿವರ್ಧಕಗಳ ಬಳಕೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾರೀ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಇಂತಹ ಸಾಧನಗಳ ಬಳಕೆಯನ್ನು ನಿರ್ಬಂಧಿಸುವ ಪೊಲೀಸರ ಕ್ರಮ ಸರಿಯಾಗಿದೆ ಎಂದು ನ್ಯಾಯಪೀಠ ಹೇಳಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವುಗಳ ಬಳಕೆಯನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಡಿಜೆ ಸಂಘಟನೆಯ ವಾದ ಮತ್ತು ಅದಕ್ಕೆ ನ್ಯಾಯಾಲಯದ ಉತ್ತರ

ಡಿಜೆ ಸಂಘಟನೆಯು ತಮ್ಮ ವಾದದಲ್ಲಿ, ಡಿಜೆ ಮತ್ತು ಸೌಂಡ್ ಸಿಸ್ಟಮ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಸಂವಿಧಾನದತ್ತವಾದ ತಮ್ಮ ಮೂಲಭೂತ ವ್ಯಾಪಾರ ಮಾಡುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿತ್ತು. ಜೊತೆಗೆ, ಧ್ವನಿವರ್ಧಕಗಳ ತಯಾರಿಕೆ ಮತ್ತು ಮಾರಾಟಕ್ಕೆ ಅನುಮತಿ ಇರುವಾಗ, ಅವುಗಳ ಬಳಕೆಯನ್ನು ನಿರ್ಬಂಧಿಸುವುದು ಸಮಂಜಸವಲ್ಲ ಎಂದು ವಾದಿಸಿತ್ತು. ಆದರೆ, ಈ ವಾದವನ್ನು ಹೈಕೋರ್ಟ್ ಪುರಸ್ಕರಿಸಿಲ್ಲ. ಶಬ್ದ ಮಾಲಿನ್ಯವು ಸಾರ್ವಜನಿಕ ಆರೋಗ್ಯ ಮತ್ತು ಶಾಂತಿಗೆ ಗಂಭೀರ ಅಪಾಯ ತಂದೊಡ್ಡುವುದರಿಂದ, ಅದನ್ನು ನಿಯಂತ್ರಿಸುವ ಸರ್ಕಾರದ ಕ್ರಮಗಳು ನ್ಯಾಯಸಮ್ಮತವಾಗಿವೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ. 

ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣ: 'ಮಾಸ್ಕ್ ಮ್ಯಾನ್' ಚಿನ್ನಯ್ಯ ಅರೆಸ್ಟ್

 


ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, `ಮಾಸ್ಕ್ ಮ್ಯಾನ್' ಎಂದೇ ಗುರುತಿಸಿಕೊಂಡಿದ್ದ ಚಿನ್ನಯ್ಯನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆಗಾಗಿ ಬೆಳ್ತಂಗಡಿಯ ವಿಶೇಷ ತನಿಖಾ ತಂಡದ (SIT) ಕಚೇರಿಯಿಂದ ತಾಲ್ಲೂಕು ಆಸ್ಪತ್ರೆಗೆ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕರೆದೊಯ್ದು, ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಸುಮಾರು 19 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಆತ ಹಲವು ಪ್ರಮುಖ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಚಿನ್ನಯ್ಯ ಹೆಸರಿಸಿರುವ ವ್ಯಕ್ತಿಗಳನ್ನು ವಿಚಾರಣೆಗಾಗಿ ಕರೆಸುವ ಸಾಧ್ಯತೆ ಇದೆ.

ಆರೋಪಿ ಚಿನ್ನಯ್ಯ, ತಾನು 2014ರ ನಂತರ ತಮಿಳುನಾಡಿನಲ್ಲಿದ್ದೆ ಮತ್ತು 2023ರಲ್ಲಿ ಮೂವರ ಗುಂಪೊಂದು ತನ್ನನ್ನು ಇಲ್ಲಿಗೆ ಕರೆತಂದು ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಿತ್ತು ಎಂದು ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ. ಈ ಮೊದಲು, ತಾನು ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿ ಸಂಚಲನ ಮೂಡಿಸಿದ್ದ. ಆದರೆ ಈಗ ತನ್ನ ಹೇಳಿಕೆಯಿಂದ ಯೂ ಟರ್ನ್ ಹೊಡೆದಿದ್ದಾನೆ. ಆದರೂ, ಆತ ಕಳೆದೊಂದು ತಿಂಗಳಿನಿಂದ ಉತ್ಖನನ ಕಾರ್ಯಕ್ಕೆ ಸಂಬಂಧಿಸಿದಂತೆ ಹಲವು ಕಡೆಗಳಲ್ಲಿ ಓಡಾಡಿದ್ದ. ಸದ್ಯ, ಆತನ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ

ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ, ವೈದ್ಯಕೀಯ ಪ್ರಮಾಣಪತ್ರ ಪಡೆದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಎಸ್ಐಟಿ ಚಿನ್ನಯ್ಯನನ್ನು ತಮ್ಮ ವಶಕ್ಕೆ ಕೇಳುವ ಸಾಧ್ಯತೆ ಹೆಚ್ಚಿದೆ.

ಧರ್ಮಸ್ಥಳಕ್ಕೆ ನರಮಂಡಲ ತರಲು ಹೇಳಿದ ಮೂವರ ಹೆಸರನ್ನು `ಮಾಸ್ಕ್ ಮ್ಯಾನ್' ಚಿನ್ನಯ್ಯ ಬಹಿರಂಗಪಡಿಸಿದ್ದು, ಪೊಲೀಸರು ಮತ್ತು ಎಸ್ಐಟಿ ತಂಡ ಈ ಕುರಿತು ಆಳವಾದ ತನಿಖೆ ನಡೆಸಲಿದೆ. ನೂರಾರು ಶವಗಳಲ್ಲಿ ಶೇಕಡಾ 90ರಷ್ಟು ಮಹಿಳೆಯರು, ಯುವತಿಯರು ಮತ್ತು ಬಾಲಕಿಯರ ಶವಗಳಿದ್ದವು, ಮತ್ತು 15 ವರ್ಷದ ಬಾಲಕಿಯೊಬ್ಬಳ ದೇಹದಲ್ಲಿ ಲೈಂಗಿಕ ದೌರ್ಜನ್ಯದ ಗಾಯಗಳಿದ್ದವು ಎಂದು ಈ ಹಿಂದೆ ಚಿನ್ನಯ್ಯ ಹೇಳಿಕೆ ನೀಡಿದ್ದ. ಈಗ ಆತನ ಬಂಧನವು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಧರ್ಮಸ್ಥಳ ಪ್ರಕರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಸಭಾಧ್ಯಕ್ಷರಿಗೆ ಮನವಿ ಮಾಡಲಾಗಿದೆ : ಶಾಸಕ ಸುನೀಲ್ ಕುಮಾರ್


 ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ವರ್ಷದ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಜಿಪಿಆರ್ ಮೂಲಕ ಅಸ್ತಿಪಂಜರ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.ಅಲ್ಲದೆ ಈ ಒಂದು ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕೂಡ ಎಂಟ್ರಿ ಕೊಟ್ಟಿದ್ದು, ಎಸ್‌ಐಟಿ ಅಧಿಕಾರಿಗಳಿಂದ ಹಾಗೂ ಪೊಲೀಸರಿಂದ ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ.

ಅಲ್ಲದೆ ಸುಮೋಟೋ ಕೇಸ್ ಕೂಡ ದಾಖಲಿಸಿಕೊಂಡಿದೆ.ಈ ವಿಚಾರವಾಗಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡಲು ಸದನದಲ್ಲಿ ಪ್ರಸ್ತಾಪ ಮಾಡಲು ಸ್ಪೀಕರ್ಗೆ ಅವಕಾಶ ಕೇಳಿದ್ದೇವೆ. ಧರ್ಮಸ್ಥಳ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ಕೊಡುತ್ತೇವೆ ಇಂದು ಸಭಾಧ್ಯಕ್ಷರು ಹೇಳಿದ್ದಾರೆ ಇವತ್ತು ಅವಕಾಶ ಕೊಟ್ಟರೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ಬೆಂಗಳೂರಲ್ಲಿ ಸುನೀಲ್ ಕುಮಾರ್ ತಿಳಿಸಿದರು.

ಆಗಸ್ಟ್ 5 ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರಿಕೆ: ಹವಾಮಾನ ಇಲಾಖೆ ಮುನ್ಸೂಚನೆ


ಬೆಂಗಳೂರು: ರಾಜ್ಯದಲ್ಲಿ ಭಾನುವಾರದಿಂದ ಆರಂಭವಾಗಿರುವ ಮಳೆಯು ಇನ್ನು ಮೂರು ದಿನಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ 5 ರಿಂದ ಆಗಸ್ಟ್ 7 ರ ವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ 7ರವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಂಭವವಿದ್ದು, ಆದ್ದರಿಂದ ಆಗಸ್ಟ್ 4 ರಿಂದ 7 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಯಾವ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್?

 * ಆಗಸ್ಟ್ 5 ರಂದು: ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು, ಮತ್ತು ದಕ್ಷಿಣ ಒಳನಾಡಿನ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

 * ಆಗಸ್ಟ್ 6 ಮತ್ತು 7 ರಂದು: ಕರಾವಳಿಯ ಮೂರು ಜಿಲ್ಲೆಗಳ ಜೊತೆಗೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ಈ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇನ್ನು, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಮಳೆಯಾಗಲಿದೆ. ಅದೇ ರೀತಿ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಮತ್ತು ವಿಜಯನಗರ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆ SIT ತನಿಖೆಗೆ ನೀಡಿ ರಾಜ್ಯ ಸರ್ಕಾರ ಆದೇಶ


 ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿರುವುದಾಗಿ ಧರ್ಮಸ್ಥಳ ಪೊಲೀಸ್‌ ಠಾಣೆಗೆ ವ್ಯಕ್ತಿಯೊಬ್ಬ ದೂರು ನೀಡಿ ಬೆಳ್ತಂಗಡಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ ಸಂಬಂಧ ಇದೀಗ ವಿಶೇಷ ತನಿಖಾ ತಂಡ(SIT) ಕ್ಕೆ ವರ್ಗಾಯಿಸಿ ಜುಲೈ 19 ರಂದು ಮಾನ್ಯ ಕರ್ನಾಟಕ ಸರ್ಕಾರವು ಆದೇಶಿಸಿದೆ.

ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ತಿಳಿಸಿದ್ದಾರೆ.

ವಿಶೇಷ ತನಿಖಾ ಸಂಸ್ಥೆ(SIT) ಯ ಮುಖ್ಯಸ್ಥರಾಗಿ ಐಪಿಎಸ್ ಪ್ರಣವ ಮೋಹಾಂತಿ ಹಾಗೂ ಸದಸ್ಯರಾಗಿ ಐಪಿಎಸ್ ಗಳಾದ ಎಂ.ಎನ್.ಅನುಚೇತ್, ಸೌಮ್ಯಲತ, ಜಿತೇಂದ್ರ ಕುಮಾ‌ರ್ ದಯಾಮ ರವರನ್ನು ಸರಕಾರ ನೇಮಿಸಿದೆ.



ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಸಾಧ್ಯತೆ : ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ

 


ಉಡುಪಿ:ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆ, ಜುಲೈ 18 ರ ವರೆಗೆ ಜಿಲ್ಲೆಯ ಎಲ್ಲಾ ಮೀನುಗಾರರು ಸಮುದ್ರಕ್ಕೆ ತೆರಳಬಾರದು ಹಾಗೂ ಸಾಂಪ್ರದಾಯಿಕ ಮೀನುಗಾರರು ಸಮುದ್ರ ದಡದಲ್ಲಿ ನಿಲ್ಲಿಸಿಟ್ಟಿರುವ ದೋಣಿ ಮತ್ತು ಬಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಸಣ್ಣ ಮತ್ತು ಮಧ್ಯಮ ದೋಣಿಗಳು ಮೀನುಗಾರಿಕೆಗೆ ತೆರಳದಂತೆ ಹಾಗೂ ಮುಂದಿನ ದಿನಗಳಲ್ಲಿ ಮೀನುಗಾರಿಕೆಗೆ ತೆರಳುವಾಗ ಕಡ್ಡಾಯವಾಗಿ ಜೀವರಕ್ಷಕ ಸಾಧನಗಳನ್ನು ಬಳಸಿ ಸುರಕ್ಷಿತ ಮೀನುಗಾರಿಕೆಯನ್ನು ಕೈಗೊಳ್ಳುವಂತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

ಧರ್ಮಸ್ಥಳ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲು: ದ.ಕ. ಜಿಲ್ಲಾ ಎಸ್ಪಿ ಅರುಣ್ ಕುಮಾರ್

 


ಮಂಗಳೂರು: ಧರ್ಮಸ್ಥಳದಲ್ಲಿ ಈ ಹಿಂದೆ ನಡೆದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.

ಈ ಹಿಂದೆಯೇ ಧರ್ಮಸ್ಥಳದಲ್ಲಿ ಹಲವು ಅಪರಾಧ ಕೃತ್ಯಗಳು ನಡೆದಿದೆ. ತನಗೆ ಜೀವ ಬೆದರಿಕೆ ಒಡ್ಡಿ ಈ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ. ಪ್ರಸಕ್ತ ತನಗೆ ಪಾಪಪ್ರಜ್ಞೆ ಕಾಡುತ್ತಿದೆ. ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ತಾನು ಸಿದ್ಧವಿರುವುದಾಗಿ ದೂರುದಾರರು ತಿಳಿಸಿದ್ದಾರೆ. ಗುರುವಾರ ತನ್ನ ಕಚೇರಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಈ ವ್ಯಕ್ತಿಯಿಂದ ದೂರು ಸಲ್ಲಿಕೆಯಾಗಿದೆ. ದೂರುದಾರರು ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿಡುವಂತೆ ವಿನಂತಿಸಿಕೊಂಡ ಮೇರೆಗೆ ಅವರ ಬಗ್ಗೆ ಮಾಹಿತಿಯನ್ನು ನೀಡಲಾಗುವುದಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.

ಈ ದೂರಿನ ಬಗ್ಗೆ ನ್ಯಾಯಾಲಯದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:39/2025, ಕಲಂ:211()ಬಿಎನ್‌ಎಸ್ ಕಾಯ್ದೆಯಡಿ ಗುರುವಾರ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ| ಮುಂದಿನ ೬ ದಿನಗಳ‌ ಕಾಲ ಭಾರೀ ಮಳೆ ಸಾಧ್ಯತೆ| ವಿವಿಧ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ

 


ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ(ಮೇ 19) ಸತತವಾಗಿ ಆರು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ. ಬೀಸಲಿದ್ದು, ಬಹುತೇಕ ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ.

ಮೇ 19ರಂದು ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಮತ್ತು ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಹಾಸನ, ಕೋಲಾರ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮೇ 20ರಂದು ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮೇ 21ರಿಂದ 24ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಕಲಬುರಗಿಗೆ ಕೊನೆ ಸ್ಥಾನ


ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು (ಮೇ 02) ಎಸ್‌ಎಸ್‌ಎಲ್‌ಸಿ ಪರೀಕ್ಷೆ -1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟಾರೆ ಶೇ. 66.14 ಮಕ್ಕಳು ತೇರ್ಗಡೆಯಾಗಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ದಕ್ಷಿಣ ಕನ್ನಡ (91.12%) ಹಾಗೂ ಉಡುಪಿ ಜಿಲ್ಲೆ(89.96%) ಹಾಗೂ ಉತ್ತರ ಕನ್ನಡ ಜಿಲ್ಲೆಗೆ(83.19%) ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಸಿಕ್ಕಿದೆ. ಕಲಬುರಗಿ ಜಿಲ್ಲೆಗೆ ರಾಜ್ಯದಲ್ಲಿ ಕೊನೆ ಸ್ಥಾನ ದೊರೆತಿದೆ.

ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಇಂದು ಬೆಳಗ್ಗೆ 11.30ಕ್ಕೆ ಮಂಡಳಿಯ ಅಧಿಕಾರಿಗಳ ಜತೆ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶವನ್ನು ಪ್ರಕಟಿಸಿದರು. ಮಂಡಳಿಯ ವೆಬ್‌ಸೈಟ್ https://karresults.nic.in ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಈ ಬಾರಿ 22 ವಿದ್ಯಾರ್ಥಿಗಳುನ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.

ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕರ್ನಾಟಕದಾದ್ಯಂತ 15,881 ಪ್ರೌಢಶಾಲೆಗಳಿಂದ 4,61,563 ಹುಡುಗರು ಮತ್ತು 4,34,884 ಹುಡುಗಿಯರು ಪರೀಕ್ಷೆಗೆ ದಾಖಲಾಗಿದ್ದರು

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 8.9 ಲಕ್ಷ ವಿದ್ಯಾರ್ಥಿಗಳು ಕರ್ನಾಟಕ ಮಂಡಳಿಯ 10 ನೇ ತರಗತಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅವರಲ್ಲಿ 4.5 ಲಕ್ಷ ಹುಡುಗರು ಮತ್ತು 4.3 ಲಕ್ಷ ಹುಡುಗಿಯರು ವಾರ್ಷಿಕ ಮಂಡಳಿ ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಉತ್ತೀರ್ಣ ಶೇಕಡಾವಾರು 73.40 ರಷ್ಟಿತ್ತು, ಇದು 2023 ರಲ್ಲಿ 83.89 ಪ್ರತಿಶತ ಮತ್ತು 2022 ರಲ್ಲಿ 85.13 ಪ್ರತಿಶತದಿಂದ ಕಡಿಮೆಯಾಗಿದೆ.


ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ: ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಹತ್ಯೆ


ಮಂಗಳೂರು, ಮೇ 1: ಬಜಪೆ ಸಮೀಪದ ಕಿನ್ನಿಪದವು ಎಂಬಲ್ಲಿ ಹಿಂದೂ ಕಾರ್ಯಕರ್ತರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

 ಮೃತಪಟ್ಟ ಕಾರ್ಯಕರ್ತನನ್ನು ಸುಹಾಸ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು.

ಪೊಲೀಸ್ ಮೂಲಗಳ ಪ್ರಕಾರ, ರಾತ್ರಿ ವೇಳೆ ಸುಹಾಸ್ ಶೆಟ್ಟಿ ಮೇಲೆ ನಾಲ್ವರು ದುಷ್ಕರ್ಮಿಗಳು ಹೊಂಚು ಹಾಕಿ ತಲವಾರುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುಹಾಸ್ ಶೆಟ್ಟಿಯನ್ನು ತಕ್ಷಣವೇ ಸ್ಥಳೀಯರು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ.

ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದನು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆಗೆ ಪ್ರತೀಕಾರವಾಗಿ 2022ರ ಜುಲೈ 28ರಂದು ಸುರತ್ಕಲ್‌ನಲ್ಲಿ ಫಾಜಿಲ್ ಎಂಬಾತ ಕೊಲೆಯಾಗಿದ್ದನು. ಈ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು. ಇತ್ತೀಚೆಗಷ್ಟೇ ಸುಹಾಸ್ ಶೆಟ್ಟಿ ಜೈಲಿನಿಂದ ಬಿಡುಗಡೆಯಾಗಿದ್ದನು. ಬಿಡುಗಡೆಯಾದ ನಂತರ ಆತ ಯಾವುದೇ ಸಂಘಟನೆಯಲ್ಲಿ ಸಕ್ರಿಯನಾಗಿರಲಿಲ್ಲ ಎಂದು ತಿಳಿದುಬಂದಿದೆ.

ಸುಹಾಸ್ ಶೆಟ್ಟಿ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯ ಮುಂದೆ ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 

ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕ ಡಾ.ವೈ. ಭರತ್ ಶೆಟ್ಟಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಹಲವು ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆ ಮಾಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

 ಪ್ರಾಥಮಿಕ ತನಿಖೆಯ ಪ್ರಕಾರ, ಫಾಜಿಲ್ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಬಿಜೆಪಿ ಸರ್ಕಾರವಿದ್ದು ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಿದ್ದರೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗೆ ಮುತ್ತಿಕ್ಕಿದವನಿಗೆ ಗುಂಡಿಕ್ಕಿ ಕೊಲ್ಲುತ್ತಿತ್ತು; ವಿಜಯೇಂದ್ರ ಹೇಳಿಕೆ

 


ಪ್ರವೀಣ್ ನೆಟ್ಟಾರು ಕೊಲೆ ಮಾಡಿದ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿ ಮುತ್ತು ಕೊಟ್ಟಿದ್ದಾನೆ. ರಾಜ್ಯದಲ್ಲಿದ್ದಿದ್ದರೆ ಆ ದೇಶದ್ರೋಹಿನ ಗುಂಡಿಕ್ಕಿ ಕೊಲ್ಲುವಂತ ಕೆಲಸ ಸರಕಾರ ಮಾಡುತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ

ಮಂಗಳೂರಿನಲ್ಲಿ ನಡೆದ ಬಿಜೆಪಿ ಜನಾಕ್ರೋಶ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂ ಗಳಿಗೆ ಅಪಮಾನ ಮಾಡುವ ಕಾರ್ಯ ಮಾಡ್ತಾ ಇದೆ. ಮುಂದಿನ ದಿನಗಳಲ್ಲಿ ಬಿಜೆಪಿ ಕಾಂಗ್ರೆಸ್ ನ್ನು ಬುಡ ಸಮೇತ ಕಿತ್ತು ಹಾಕಲಿದ್ದೇವೆ ಎಂದರು. ಪ್ರವೀಣ್ ನೆಟ್ಟಾರು ಅವರನ್ನು ಕೊಂದ ಒಬ್ಬ ದೇಶ ದ್ರೋಹಿಯನ್ನು ಕೋರ್ಟ್ ಗೆ ತರುವ ವೇಳೆ ಒಬ್ಬ ದೇಶದ್ರೋಹಿ ಬಂದು ಮುತ್ತು ಕೊಟ್ಟಿದ್ದಾನೆ. ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು ಯಡಿಯೂರಪ್ಪ ಸರ್ಕಾರದ ಅವದಿಯಲ್ಲಿ ಆಗಿದ್ರೆ ಅಲ್ಲೇ ಆ ದೇಶ ದ್ರೋಹಿಯನ್ನು ಗುಂಡಿಕ್ಕಿ ಕೊಲ್ಲುವ ಕಾರ್ಯ ಆಗ್ತಾ ಇತ್ತು ಎಂದರು.

ಹಿಂದು ಹುಡುಗಿಯರ ಮೇಲೆ ಅತ್ಯಾಚಾರ, ಆಕ್ರಮಣ ಆಗುತ್ತಿದ್ದರೂ ಸಿದ್ದರಾಮಯ್ಯ ಸರಕಾರ ಅವರ ಆತ್ಮರಕ್ಷಣೆಗೆ ಯೋಜನೆ ರೂಪಿಸಿಲ್ಲ. ಮುಸ್ಲಿಮ್ ಹುಡುಗಿಯರ ರಕ್ಷಣೆಗಾಗಿ ಸಿದ್ದರಾಮಯ್ಯ ಹಣ ತೆಗೆದಿಟ್ಟಿದ್ದಾರೆ. ಅಲ್ಲದೆ, ಮುಸ್ಲಿಮ್ ಹೆಣ್ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯಲು ಹಣ ಕೊಡುತ್ತಿದ್ದಾರೆ ಎಂದು ಹೇಳಿದ ವಿಜಯೇಂದ್ರ, ದಕ್ಷಿಣ ಕನ್ನಡ ಜಿಲ್ಲೆಯ ಜನರು ಇವರಿಗೆ ಓಟ್ ಕೊಟ್ಟಿಲ್ಲ ಎಂದು ಅನುದಾನ ಕೊಡುತ್ತಿಲ್ಲ. ಬಿಜೆಪಿ ಸರಕಾರ ಇದ್ದಾಗ ದಕ್ಷಿಣ ಕನ್ನಡ ಜಿಲ್ಲೆಗೆ 19 ಸಾವಿರ ಕೊಟ್ಟಿತ್ತು. ಕಾಂಗ್ರೆಸ್ ಸರಕಾರ ಎರಡು ವರ್ಷದಲ್ಲಿ ಏನಾದ್ರೂ ಕೊಟ್ಟಿದೆಯಾ ಎಂದು ಪ್ರಶ್ನಿಸಿದರು.


ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; "ಉಡುಪಿ ಫಸ್ಟ್"; ದ.ಕ ದ್ವಿತೀಯ

 

ಬೆಂಗಳೂರು, ಏಪ್ರಿಲ್ 8: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಈ ಬಾರಿ ಒಟ್ಟಾರೆ ಶೇಕಡಾ 73.45 ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಇಳಿಕೆ ಕಂಡುಬಂದಿದೆ.
ಇಲಾಖೆಯ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಫಲಿತಾಂಶವು ಮಧ್ಯಾಹ್ನ 1.30 ರ ನಂತರ ಇಲಾಖೆಯ ಅಧಿಕೃತ ಜಾಲತಾಣಗಳಾದ karresults.nic.in ಮತ್ತು kseab.karnataka.gov.in ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಬಾರಿಯ ಫಲಿತಾಂಶದಲ್ಲಿಯೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಲಿಂಗವಾರು ಫಲಿತಾಂಶದ ವಿವರಗಳನ್ನು ಇಲಾಖೆ ಶೀಘ್ರದಲ್ಲೇ ಪ್ರಕಟಿಸಲಿದೆ.
ರಾಜ್ಯದ ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆಯು ಅತ್ಯುತ್ತಮ ಸಾಧನೆ ತೋರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯು ದ್ವಿತೀಯ ಸ್ಥಾನವನ್ನು ಗಳಿಸಿದೆ. 

ಈ ಬಾರಿ ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ರಾಜ್ಯಾದ್ಯಂತ ಒಟ್ಟು 7 ಲಕ್ಷದ 13 ಸಾವಿರದ 862 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.
ಫಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಲು ಮತ್ತು ಅಂಕಪಟ್ಟಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮರು ಮೌಲ್ಯಮಾಪನ ಮತ್ತು ಪೂರಕ ಪರೀಕ್ಷೆಗಳ ಕುರಿತಾದ ಮಾಹಿತಿಯನ್ನು ಇಲಾಖೆ ಪ್ರಕಟಿಸಲಿದೆ.

ಬೆಲೆ ಏರಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯದಾದ್ಯಂತ ಹೋರಾಟ: 2ರಿಂದ ಅಹೋರಾತ್ರಿ ಧರಣಿ

 


ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಏಪ್ರಿಲ್ 2ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ಸಾಮಾನ್ಯ ಜನರಿಗೆ ಸಿಕ್ಕಿರುವ ಏಕೈಕ ಖಾತರಿ ಬೆಲೆ ಏರಿಕೆ… ಈ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತಿದ್ದಾರೆ" ಎಂದು ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.

ಬೆಲೆ ಏರಿಕೆ ವಿರುದ್ಧ ಏಪ್ರಿಲ್ 2ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 5 ರಂದು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 7 ರಂದು ನಾವು ಮೈಸೂರಿನಿಂದ 'ಜನ ಆಕ್ರೋಶ ಯಾತ್ರೆ' ನಡೆಸಲಿದ್ದೇವೆ… ಪಕ್ಷದ ಎಲ್ಲಾ ನಾಯಕರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ" ಎಂದು ಅವರು ಹೇಳಿದರು. ಎಸ್ಸಿ ಮತ್ತು ಎಸ್ಟಿ ಸಮುದಾಯಗಳನ್ನು ನಿರ್ಲಕ್ಷಿಸುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ಸಮುದಾಯವನ್ನು ಓಲೈಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.

ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಬಜೆಟ್ ನೀಡಿಲ್ಲ. ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ಎಲ್ಲವನ್ನೂ ಹೇಳುತ್ತಾರೆ ಆದರೆ ಎಲ್ಲಾ ಹಿಂದೂ ಸಮುದಾಯಗಳನ್ನು ನಿರ್ಲಕ್ಷಿಸುತ್ತಾರೆ. ಸಿದ್ದರಾಮಯ್ಯ ಅವರು ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು. 


ಉಡುಪಿ: ಬೆಳಕು ಮೀನುಗಾರಿಕೆ, ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ

 


ಉಡುಪಿ: ಕೇಂದ್ರ ಸರಕಾರದ 2017ರ ನ.10 ಹಾಗೂ 2018ರ ಮಾ.7ರ ಆದೇಶದಂತೆ ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಆದರೂ ಜಿಲ್ಲೆಯಲ್ಲಿ ಬೆಳಕು ಮೀನುಗಾರಿಕೆಯ ಪ್ರಕರಣಗಳು ವರದಿ ಯಾಗುತ್ತಿದ್ದು, ಈ ಸಂಬಂಧ ಉಚ್ಛ ನ್ಯಾಯಾಲಯದಲ್ಲಿಯೂ ಪ್ರಕರಣಗಳು ದಾಖಲಾಗಿದೆ.

ನ್ಯಾಯಾಲಯದಿಂದ ಈ ಸಂಬಂಧ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರಗಿಸಲು ನಿರ್ದೇಶನವಿದೆ. ಆದ್ದರಿಂದ ನ್ಯಾಯಾಲಯ ಹಾಗೂ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆಯಲ್ಲಿ ತೊಡಗುವ ದೋಣಿಗಳ ಮೀನುಗಾರಿಕಾ ಪರವಾನಿಗೆ ಹಾಗೂ ದೋಣಿ ನೋಂದಣಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಅಂತಹ ದೋಣಿಗಳಿಗೆ ಡೀಸೆಲ್ ವಿತರಣೆಯನ್ನು ನಿಲ್ಲಿಸಲಾಗುವುದು. 

ಇಂತಹ ಪ್ರಕರಣಗಳು ಪುನರಾವರ್ತಿಸಿದಲ್ಲಿ ಶಾಶ್ವತವಾಗಿ ಅಂತಹ ದೋಣಿಗಳ ನೋಂದಣಿಯನ್ನು ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲೆಯ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.


ಹನಿಟ್ರ್ಯಾಪ್ ಗದ್ದಲ; ವಿಧಾನಸಭೆಯಿಂದ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ 18 ಬಿಜೆಪಿ ಶಾಸಕರು 6 ತಿಂಗಳು ಸಸ್ಪೆಂಡ್!

 


ಹನಿಟ್ರ್ಯಾಪ್ ಪ್ರಕರಣ ಕುರಿತಂತೆ ಗದ್ದಲ ಎಬ್ಬಿಸಿ, ಸದನದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಬಿಜೆಪಿಯ 18 ಮಂದಿ ಶಾಸಕರನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಆರು ತಿಂಗಳವರೆಗೂ ಅಮಾನತುಗೊಳಿಸಿದ್ದಾರೆ.

ವಿಧಾನಸಭೆಯ ಕಲಾಪದ ವೇಳೆ ಸ್ಪೀಕರ್ ಯುಟಿ ಖಾದರ್ ಅವರ ಪೀಠದ ಎದುರು ಬಜೆಟ್ನ ಪ್ರತಿ ಹರಿದು ಹಾಕುವ ಮೂಲಕ ಸದನದ ಕಲಾಪಕ್ಕೆ ಅಡ್ಡಿ ಮಾಡಿದ್ದು ಹಾಗೂ ಬೇಜವಾಬ್ದಾರಿಯಿಂದ ನಡೆದುಕೊಂಡ ಆರೋಪದಡಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಖಾದರ್ ಅವರು ಆದೇಶಿಸಿದ್ದಾರೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಘೋಷಿಸಿದರು. ಪೀಠಕ್ಕೆ ಅಶಿಸ್ತನ್ನು ತೋರಿದವರನ್ನು ಅಮಾನತು ಮಾಡಲಾಗಿದೆ. ನನಗೆ ಅವಮಾನ ಮಾಡಿದರೆ ಸಹಿಸುವೆ. ಆದರೆ ಪೀಠಕ್ಕೆ ಅಗೌರವ ತೋರಿದ್ದನ್ನು ಸಹಿಸಲ್ಲ ಎಂದು ಖಾದರ್ ಅವರು ಪ್ರತಿಪಾದಿಸಿದರು.

ಸದನದ ನಡಾವಳಿ ವಿರುದ್ಧ ನಡೆದುಕೊಂಡವರನ್ನು ಅಮಾನತು ಮಾಡಬೇಕು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಆಡಳಿತರೂಢ ಸಚಿವರು ಮನವಿ ಮಾಡಿದ್ದರು. ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಭಟಿಸಿದ ಪ್ರತಿಪಕ್ಷದ ನಾಯಕರು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದೂ ಒತ್ತಾಯಿಸಿ ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದರು.

ದೊಡ್ಡನಗೌಡ ಪಾಟೀಲ್ ಸೇರಿಂದತೆ ಮುನಿರತ್ನ ನಾಯ್ಡು, ಅಶ್ವಥ್ ನಾರಾಯಣ, ಎಸ್,ಆರ್,ವಿಶ್ವನಾಥ್, ಭರತ್ ಶೆಟ್ಟಿ, ಶರಣು ಸಲಗಾರ್, ಸಿ.ಕೆ.ರಾಮಮೂರ್ತಿ, ಧೀರಜ್ ಮುನಿರಾಜು, ಯಶ್ ಪಾಲ್ ಸುವರ್ಣಾ, ಉಮಾನಾಥ ಕೊಟ್ಯಾನ್, ಬಿ.ಪಿ ಹರೀಶ್, ಬಿ.ಸುರೇಶ್ ಗೌಡ, ಚನ್ನಬಸವ, ಬಸವರಾಜ ಮತ್ತಿಮಡು, ಭೈರತಿ ಬಸವರಾಜ, ಎಂ.ಆರ್.ಪಾಟೀಲ್, ಚಂದ್ರು ಲಮಾಣಿ, ಬಿ.ಸುರೇಶ್ಗೌಡ ಇನ್ನಿತರರನ್ನು ಸಸ್ಪೆಂಡ್ ಮಾಡಲಾಗಿದೆ.

ಮಂಗಳೂರು: ಕೋಮು ದ್ವೇಷ ಭಾಷಣ ಆರೋಪ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲು


ಮಂಗಳೂರು : ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಕಾಂಗ್ರೆಸ್ ನಾಯಕರೊಬ್ಬರು ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಆರೋಪಿಸಿ ದೂರು ನೀಡಲಾಗಿದೆ.

ಅದರನ್ವಯ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಈ ಬಗ್ಗೆ ಸ್ವತಃ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ದೂರಿನ ಪ್ರತಿ ಹಂಚಿಕೊಂಡಿದ್ದಾರೆ.

ಭಾಷಣದ ವೇಳೆ ಚಕ್ರವರ್ತಿ ಸೂಲಿಬೆಲೆ ಅವರು ಕೋಮು ದ್ವೇಷದ ಭಾಷಣ ಮಾಡಿದ್ದಾರೆ ಎಂದು ಇಲ್ಲಿನ ಕಾಂಗ್ರೆಸ್ ಅಧ್ಯಕ್ಷ ಮುಸ್ತಫಾ ಅಬ್ದುಲ್ ಅವರು ಆರೋಪಿಸಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ದೂರಿನಡಿ ಸೂಲಿಬೆಲೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರಿನಲ್ಲಿ ಇತ್ತೀಚೆಗೆ ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಪಾದಯಾತ್ರೆ ಸಮಾರೋಪ ನಡೆಯಿತು. ಈ ವೇಳೆ ಅಲ್ಲಿ ಅತಿಥಿಯಾಗಿ ತೆರಳಿದ್ದ ಚಕ್ರವರ್ತಿ ಸೂಲಿಬೆಲೆ ಅವರು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಈ ವೇಳೆ ಅವರು ಕೋಮು ಧ್ವೇಷದ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

FIR ಕುರಿತು ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

ಉಳ್ಳಾಲ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಬಗ್ಗೆ ಸ್ವತಃ ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಎಕ್ಸ್‌ ಪೋಸ್ಟ್‌ನಲ್ಲಿ 'ನನ್ನ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಈ ಬಾರಿ ದ್ವೇಷ ಭಾಷಣಕ್ಕಾಗಿ ಅಲ್ಲ. ಬದಲಿಗೆ ಪ್ರೀತಿಯನ್ನು ಪ್ರತಿಪಾದಿಸಿದ್ದಕ್ಕಾಗಿ. ಪ್ರೀತಿಗೆ ಯಾವುದೇ ಮಿತಿಯಿಲ್ಲ ಎಂದು ನಾನು ಹೇಳಿದ್ದೇನೆ. ಮತ್ತು ಹಿಂದೂ ಹುಡುಗರು ಸಮುದಾಯಗಳನ್ನು ಮೀರಿ ಮದುವೆಯಾಗಲು ಸಾಮಾಜಿಕ ನಿರ್ಬಂಧಗಳಿಂದ ಮುಕ್ತರಾಗಬೇಕು ಎಂದಿದ್ದೇನೆ. ಇದನ್ನು ದ್ವೇಷ ಎಂದು ಹೇಗೆ ಪರಿಗಣಿಸಬಹುದು?'' ಎಂದು ಅವರು ತಮ್ಮ ಮೇಲಿನ ಆರೋಪ ತಳ್ಳಿ ಹಾಕಿದ್ದಾರೆ. 


ಮಂಗಳೂರು: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆ; 75 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ

 


ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವನ್ನು  ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಆಫ್ರಿಕಾ ಮೂಲದ ಇಬ್ಬರು ಮಹಿಳೆಯನ್ನು ಬಂಧಿಸಿ, 75 ಕೋಟಿ ಮೌಲ್ಯದ 37.5 ಕೆಜಿ ತೂಕದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ದಕ್ಷಿಣ ಆಫ್ರಿಕಾ ಮೂಲದ ಬಂಬಾ ಫಾಂಟಾ(31) ಹಾಗೂ ಅಬಿಗೈಲ್ ಅಡೋನಿಸ್ (30) ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿ, ದೊಡ್ಡ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಈ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಂಗಳೂರು ಸಿಸಿಬಿ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ದೊಡ್ಡ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ. 6 ತಿಂಗಳ ಹಿಂದೆ ಮಂಗಳೂರಿನ ಪಂಪ್ ವೆಲ್ ಬಳಿ ಹೈದರ್ ಎಂಬಾತನನ್ನು ಬಂದಿಸಿದ್ದೆವು. ಆತನಿಂದ 15 ಗ್ರಾಂ ಡ್ರಗ್ ಜಪ್ತಿ ಮಾಡಲಾಗಿತ್ತು. ಆತನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದವರ ಬಂಧನಕ್ಕೆ ಸಿಸಿಬಿ ಪೊಲೀಸರು ಆರು ತಿಂಗಳಿನಿಂದ ಕಾರ್ಯಾಚರಣೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ನೈಜೀರಿಯಾ ಪ್ರಜೆ ಪೀಟರ್‌ನನ್ನು ಬಂಧಿಸಿದ್ದೆವು. ಆತನಿಂದ 6 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದೆವು. ಆತನ ಮಾಹಿತಿಯಂತೆ ಮತ್ತೆ ಕಾರ್ಯಾಚರಣೆ ಮಾಡಿ ಈ ಇಬ್ಬರು ಮಹಿಳೆಯರನ್ನು ಬಂಧಿಸಿದ್ದೇವೆ. ದೆಹಲಿಯಿಂದ ಬೆಂಗಳೂರಿಗೆ ವಿಮಾನ ಮೂಲಕ ಬಂದಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರ ಎಂಬಲ್ಲಿ ಆರೋಪಿಗಳನ್ನು ಸಿಸಿಬಿ ವಶಕ್ಕೆ ಪಡೆದು, ಅವರ ಬಳಿಯ ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್ನಲ್ಲಿ ತಂದಿದ್ದ 75 ಕೋಟಿ ಮೌಲ್ಯದ 37.878 ಕೆ.ಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ. ಜತೆಗೆ 4 ಮೊಬೈಲ್ ಫೋನ್, ಟ್ರಾಲಿ ಬ್ಯಾಗ್‌ಗಳು-2, ಪಾಸ್‌ಪೋರ್ಟ್-2, ನಗದು ಹಣ 18,460 ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ದೆಹಲಿಯಿಂದ ಮಾದಕ ವಸ್ತುವಾದ ಎಂಡಿಎಂಎಯನ್ನು ವಿಮಾನದಲ್ಲಿ ಬೆಂಗಳೂರು ಹಾಗೂ ಇತರ ಕಡೆಗಳಿಗೆ ಸಾಗಾಟ ಮಾಡಿಕೊಂಡು ನೈಜೀರಿಯನ್ ಪ್ರಜೆಗಳಿಗೆ ಹಾಗೂ ಇತರ ಜನರಿಗೆ ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಿಕೊಂಡು ಹಣವನ್ನು ಸಂಪಾದಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಈ ಆರೋಪಿಗಳು ಕಳೆದ ಒಂದು ವರ್ಷದಲ್ಲಿ 59 ಬಾರಿ ವಿದೇಶದಿಂದ ದೇಶಕ್ಕೆ ಪ್ರಯಾಣಿಸಿದ್ದು, ಈ ಸಂದರ್ಭದಲ್ಲಿ ಎಂಡಿಎಂಎ ಸಾಗಾಟ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗುತ್ತಿದೆ. ವಿಮಾನ‌ ನಿಲ್ದಾಣದಲ್ಲಿ ಇಷ್ಟು ಪ್ರಮಾಣದ ಎಂಡಿಎಂಎ ಸಾಗಾಟ ಮಾಡಲು ಸಾಧ್ಯವಾದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.


ಖ್ಯಾತ ವಿದ್ವಾಂಸ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಾಮನ ನಂದಾವರ ವಿಧಿವಶ


ಮಂಗಳೂರು, ಮಾರ್ಚ್ 15: ಹಿರಿಯ ವಿದ್ವಾಂಸ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಾಮನ ನಂದಾವರ ಅವರು ಶನಿವಾರ (ಮಾರ್ಚ್ 15, 2025) ಬೆಳಗ್ಗೆ ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಮೂಲದವರಾದ ಡಾ.ವಾಮನ ನಂದಾವರ ಅವರು ಕನ್ನಡ ಮತ್ತು ತುಳು ಭಾಷಾ ವಿದ್ವಾಂಸರಾಗಿ ಹೆಸರುವಾಸಿಯಾಗಿದ್ದರು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅವರು ತುಳು ಭಾಷೆಯ ಅಧ್ಯಯನಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಜಾನಪದ ಸಿದ್ಧಾಂತದ ಅಧ್ಯಯನ, ಕಾರ್ಯಾಗಾರಗಳ ಆಯೋಜನೆ ಮತ್ತು ಭಾಗವಹಿಸುವಿಕೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ತುಳು ಪಠ್ಯಪುಸ್ತಕ ಸಮಿತಿ, ತುಳು ನಿಘಂಟು ಯೋಜನೆ ಮತ್ತು ತುಳು ಜಾನಪದ ಪತ್ರಿಕೆ ಮಂಡಳಿಯಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಬಂಟ್ವಾಳ ತಾಲೂಕಿನ 12ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು.

ಡಾ.ವಾಮನ ನಂದಾವರ ಅವರ ನಿಧನಕ್ಕೆ ಕನ್ನಡ ಮತ್ತು ತುಳು ಸಾಹಿತ್ಯ ಲೋಕದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ.ವಾಮನ ನಂದಾವರ ಅವರ ಪ್ರಮುಖ ಕೊಡುಗೆಗಳು:

 * ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ತುಳು ಭಾಷೆಯ ಅಧ್ಯಯನಕ್ಕೆ ಮಹತ್ವದ ಕೊಡುಗೆ.

 * ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಜಾನಪದ ಸಿದ್ಧಾಂತದ ಅಧ್ಯಯನ.

 * ತುಳು ಪಠ್ಯಪುಸ್ತಕ ಸಮಿತಿ, ತುಳು ನಿಘಂಟು ಯೋಜನೆ ಮತ್ತು ತುಳು ಜಾನಪದ ಪತ್ರಿಕೆ ಮಂಡಳಿಯಲ್ಲಿ ಸೇವೆ.

 * ಬಂಟ್ವಾಳ ತಾಲೂಕಿನ 12ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ.

 * ಅನೇಕ ತುಳು ಹಾಗು ಕನ್ನಡ ಸಾಹಿತ್ಯ ಕೃತಿಗಳ ರಚನೆ.

ಅಂತಿಮ ದರ್ಶನ:

 * ಮಧ್ಯಾಹ್ನ 1 ಗಂಟೆ ತನಕ ಉಳಾಯಿಬೆಟ್ಟು ಅವತಾರ್ ವಿಶ್ರಾಂತಿ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ.

 * ಮಧ್ಯಾಹ್ನ 2 ಗಂಟೆಗೆ ಉರ್ವಸ್ಟೋರ್ ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ಸಾರ್ವಜನಿಕ ದರ್ಶ

ನಕ್ಕೆ ಅವಕಾಶ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ... ಮಳೆ ಸಾಧ್ಯತೆ.!

 


ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದುಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು.ಹಾಸನ, ಕೊಡಗು ಜಿಲ್ಲೆಯಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ. ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.


ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆ ಭಾಗದ ಶಾಸಕರ ಜತೆ ಪ್ರತ್ಯೇಕ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್ :ರಾತ್ರಿ 7-8 ಗಂಟೆ ನಂತರ ಕರಾವಳಿ ಭಾಗ ಸ್ಥಬ್ಧ


ಬೆಂಗಳೂರು : “ರಾಜ್ಯದ ಕರಾವಳಿ ಭಾಗದಲ್ಲಿ ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಹಾಗೂ ವಾಣಿಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈ ಭಾಗದ ಎಲ್ಲಾ ಶಾಸಕರ ಜತೆಗೆ ನಾನು ಹಾಗೂ ಪ್ರವಾಸೋದ್ಯಮ ಸಚಿವರು ಪ್ರತ್ಯೇಕವಾಗಿ ಸಭೆ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಅವರು ಮಂಗಳವಾರ ಮಾತನಾಡಿದರು. 

ಬಿಜೆಪಿ ಶಾಸಕ ಗುರುರಾಜಶೆಟ್ಟಿ ಗಂಟಿಹೊಳೆ ಅವರು ರಾಜ್ಯ ಪ್ರವಾಸೋದ್ಯಮ ನೀತಿ ವಿಚಾರವಾಗಿ ಕರಾವಳಿ ಭಾಗವನ್ನು ವಿಶೇಷವಾಗಿ ಪರಿಗಣಿಸಬೇಕು ಎಂದು ಕೇಳಿದಾಗ ಪ್ರವಾಸೋದ್ಯಮ ಸಚಿವರು ಈ ಬಗ್ಗೆ ನಾವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ವೇಳೆ ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಕರಾವಳಿ ಭಾಗದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಬರುವ ಜನರನ್ನು ಇತರೇ ಪ್ರವಾಸೋದ್ಯಮ ಸ್ಥಳಗಳಿಗೆ ಆಕರ್ಷಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಅವರು, “ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಬಹುತೇಕ ಯುವಕರು ಗೆದ್ದು ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವಾಣಿಜ್ಯೋದ್ಯಮ ಸೇರಿದಂತೆ ದೊಡ್ಡ ಅವಕಾಶ ಕರಾವಳಿ ಭಾಗದಲ್ಲಿದೆ. ಹೀಗಾಗಿ ನಮ್ಮ ಸಚಿವರಾದ ಹೆಚ್.ಕೆ ಪಾಟೀಲ್ ಅವರು ದೊಡ್ಡ ಕನಸು ಕಂಡಿದ್ದು ನಾವು ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಈ ಸಂದರ್ಭದಲ್ಲಿ ಈ ಭಾಗದ ಶಾಸಕರ ಸಭೆ ಕರೆದು ಮಾತನಾಡಬೇಕಿದೆ. ರಾತ್ರಿ 7-8 ಗಂಟೆಯ ಮೇಲೆ ಈ ಕರಾವಳಿ ಭಾಗ ಸ್ಥಬ್ಧವಾಗುತ್ತದೆ. ಯಾವುದೇ ಕಾರ್ಯಚಟುವಟಿಕೆ ಇರುವುದಿಲ್ಲ. ಧಾರ್ಮಿಕವಾದ ಭಜನೆ, ಬಯಲಾಟ ಹೊರತಾಗಿ ಬೇರೆ ಯಾವುದೇ ಚಟುವಟಿಕೆ ಇರುವುದಿಲ್ಲ. ಈ ವಿಚಾರವಾಗಿ ಅಲ್ಲಿನ ಶಾಸಕರೇ ಕೂತು ಚರ್ಚೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಬೇಕು. ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಮಕ್ಕಳು ಶಾಲಾ ಕಾಲೇಜುಗಳಿಗೆ ಸೇರ್ಪಡೆಯಾಗುವ ಪ್ರಮಾಣವೂ ಕುಸಿಯುತ್ತಿದೆ. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ನಡೆಸುವವರು ಈ ವಿಚಾರವಾಗಿ ನಮ್ಮ ಬಳಿ ಚರ್ಚೆ ಮಾಡುತ್ತಿದ್ದಾರೆ” ಎಂದರು.

ಈ ಮಧ್ಯೆ ರಾತ್ರಿ 8ರ ನಂತರ ಏನು ಮಾಡಬೇಕು ಎಂದು ನೀವೇ ಸಲಹೆ ನೀಡಿ ಶಾಸಕ ಅರವಿಂದ್ ಬೆಲ್ಲದ್ ಅವರು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ರಾತ್ರಿ 7-8 ಗಂಟೆ ನಂತರ ಮಂಗಳೂರು ಸ್ಥಬ್ಧವಾಗಿದೆ ಎಂದರೆ ಮಂಗಳೂರಿನ ಜನ ಹೆಚ್ಚಾಗಿ ಮನೆಯಿಂದಾಚೆ ಬರುವುದಿಲ್ಲ. ಹೀಗಾದರೆ ಯಾವ ಆರ್ಥಿಕ ವಹಿವಾಟು ನಡೆಯುತ್ತದೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಕರಾವಳಿ ಭಾಗದಲ್ಲಿ ಐಟಿ ಬಿಟಿ ಸ್ಥಾಪಿಸಲು ಪ್ರಸ್ತಾವನೆ ನೀಡಿತು. ಆದರೆ ಅಲ್ಲಿ ಒಂದೇ ಒಂದು ಕಾಂಪ್ಲೆಕ್ಸ್ ಕೂಡ ಇರಲಿಲ್ಲ. ಈಗ ಮೂರೋ, ನಾಲ್ಕೋ ತಲೆ ಎತ್ತುತ್ತಿವೆ. ರಾಜ್ಯದಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಇರುವುದೆಲ್ಲ ಅಲ್ಲೇ. ಅಲ್ಲಿರುವ ಪ್ರತಿಭೆಗಳೆಲ್ಲವೂ ಬೆಂಗಳೂರು, ಮುಂಬೈ ಹಾಗೂ ಹೊರದೇಶಗಳಿಗೆ ಹೋಗುತ್ತಿದ್ದಾರೆ. ಯಾಕೆ ಈ ಪರಿಸ್ಥಿತಿ ಇದೆ? ಯಾವುದೇ ನಗರದಲ್ಲಿ ಮನರಂಜನೆಗೆ ಅವಕಾಶವಿಲ್ಲದಿದ್ದರೆ ಅಲ್ಲಿ ಯುವಕರು ಆಸಕ್ತಿ ತೋರುವುದಿಲ್ಲ. ಹೀಗಾಗಿ ಅಲ್ಲಿನ ಶಾಸಕರು ಕೂತು ಚರ್ಚೆ ಮಾಡಿ. ಈ ವಿಚಾರವಾಗಿ ನಾನು ಹಾಗೂ ಪ್ರವಾಸೋದ್ಯಮ ಸಚಿವರಿಬ್ಬರೂ ಸೇರಿ ಜಿಲ್ಲೆಯ ಎಲ್ಲಾ ಶಾಸಕರ ಜತೆ ಪ್ರತ್ಯೇಕವಾಗಿ ಸಭೆ ಮಾಡುತ್ತೇವೆ” ಎಂದು ತಿಳಿಸಿದರು. 

© all rights reserved
made with by templateszoo