ಬೆಂಗಳೂರಿಗೆ ಹೋಗುತ್ತೇನೆಂದು ಮೆಸೇಜ್ ಮಾಡಿ ಹೋದ 22 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ ಮೂಡ ಗ್ರಾಮದ ಲೆಕ್ಕೆಸಿರಿ ಪಾದೆ ನಿವಾಸಿ ರಮೇಶ್ ಸಾಲ್ಯಾನ್ ಎಂಬವರ ಪುತ್ರಿ ನೇಹಾ(22) ನಾಪತ್ತೆಯಾದವಳು. ಮಂಗಳೂರಿನಲ್ಲಿ ಸೇಫ್ಟಿ ಇನ್ಸ್ಟ್ರುಮೆಂಟ್ ಶಾಪ್ ನಲ್ಲಿ ಕೆಲಸಕ್ಕಿದ್ದ ನೇಹಾ ಮೇ 27ರಂದು ತಾನು ಬೆಂಗಳೂರಿಗೆ ಹೋಗುತ್ತಿದ್ದೇನೆಂದು ಆಂಟಿ ಒಬ್ಬರಿಗೆ ಮೆಸೇಜ್ ಮಾಡಿದ್ದು, ಆನಂತರ ಫೋನ್ ಸ್ವಿಚ್ ಆಫ್ ಮಾಡಿದ್ದಾಳೆ.
ಮನೆಯವರು ನೇಹಾಗೆ ಮದುವೆ ಮಾಡಲು ರೆಡಿ ಮಾಡುತ್ತಿದ್ದರು. ಹುಡುಗ ನೋಡುವುದಕ್ಕೆ ರೆಡಿ ಮಾಡುತ್ತಿದ್ದರೆ, ನೇಹಾ ಮಾತ್ರ ತಾನು ಈಗ ಮದುವೆಯಾಗುವುದಿಲ್ಲ. ಮತ್ತೆ ಶಿಕ್ಷಣ ಮುಂದುವರಿಸುತ್ತೇನೆ ಎಂದು ನೆಪ ಹೇಳುತ್ತಿದ್ದಳು.
ಮೇ 27ರಂದು ಎಂದಿನಂತೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದು, ಸಂಜೆ 4 ಗಂಟೆಗೆ ಆಂಟಿಯ ಮೊಬೈಲಿಗೆ ಮೆಸೇಜ್ ಬಂದಿತ್ತು. ನೇಹಾ ಈ ರೀತಿ ನಾಪತ್ತೆಯಾಗಿದ್ದು ಮನೆಯವರನ್ನು ದಿಗಿಲುಗೊಳಿಸಿದೆ.
ಮೇ 29 ಮತ್ತು ಜೂನ್ 6ರಂದು ಮನೆಯವರಿಗೆ ಪತ್ರವೊಂದು ಬಂದಿದ್ದು ತಾನು ಬೆಂಗಳೂರಿನಲ್ಲಿದ್ದೇನೆ. ಹುಡುಕುವ ಪ್ರಯತ್ನ ಬೇಡ ಎಂದು ಬರೆದಿತ್ತು. ಆನಂತರ ಯಾವುದೇ ಮೆಸೇಜ್ ಆಗಲೀ, ಫೋನ್ ಕರೆಯಾಗಲೀ ಬಂದಿಲ್ಲ. ಹೀಗಾಗಿ ನೇಹಾ ನಾಪತ್ತೆ ಆಗಿರುವುದು ಮನೆಯವರನ್ನು ಆತಂಕಕ್ಕೆ ತಳ್ಳಿದೆ. ನಾಪತ್ತೆ ಬಗ್ಗೆ ಆಕೆಯ ತಮ್ಮ ಅವಿನಾಶ್ ಬಂಟ್ವಾಳ ಠಾಣೆಯಲ್ಲಿ ದೂರು ನೀಡಿದ್ದು, ಮೊಬೈಲ್ ಲೊಕೇಶನ್ ಆಧರಿಸಿ ಪತ್ತೆ ಮಾಡುವಂತೆ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ