ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿದೆ. ಬುಧವಾರ ಇಡೀ ದಿನ ಇಡೀ ಜಿಲ್ಲೆಯಾದ್ಯಂತ ಬಿಸಿಲಿನ ವಾತಾವರಣ ಕಂಡು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ಹಲವೆಡೆ ಬೆಳಗ್ಗಿನ ಜಾವ ಮೋಡಕವಿದ ವಾತಾವರಣ ಕಂಡುಬಂದಿದ್ದು, ಸಂಜೆಯ ವೇಳೆ ಸ್ವಲ್ಪ ಮಳೆ ಸುರಿದಿದೆ.
ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಪ್ರಕ್ಷುಬ್ಧ ವಾಗಿ ಅರಬ್ಬಿ ಸಮುದ್ರ ದಲ್ಲಿ ಅಲೆಗಳ ಅಬ್ಬರ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಕಾಸರಗೋಡು ಭಾಗದಲ್ಲಿ ಉತ್ತಮ ಮಳೆಯಾದರೆಣ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು,ಉಡುಪಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಬಿಸಿಲು, ಮೋಡ, ತುಂತುರು ಮಳೆ ಕಂಡುಬಂದಿದೆ.
ಅರಬ್ಬಿ ಸಮುದ್ರದಲ್ಲಿನ ಬಿಪರ್ ಜೋಯ್ ಚಂಡಮಾರುತವು ಜೂನ್ 15ರ ಸಂಜೆ ಪಾಕಿಸ್ತಾನ, ಭಾರತ ಗಡಿ ಭಾಗಕ್ಕೆ ಅಪ್ಪಳಿಸಲಿದ್ದು, ಪಾಕಿಸ್ತಾನದ ಹೈದರಾಬಾದ್ ಮೂಲಕ ರಾಜಸ್ತಾನಕ್ಕೆ ಪ್ರವೇಶಿಸಿ ಶಿಥಿಲಗೊಳ್ಳಲಿದೆ. ಇದರ ಪರಿಣಾಮದಿಂದ ಮುಂಗಾರು ದುರ್ಬಲಗೊಂಡಿದ್ದು, ಕೇರಳ ಕರಾವಳಿಗೆ ಮಾತ್ರ ಸೀಮಿತಗೊಂಡಿದೆ.
ಜೂನ್ 18 ರಿಂದ ರಾಜ್ಯದ ಅಲ್ಲಲ್ಲಿ ಮುಂಗಾರು ಚುರುಕಾಗುವ ಲಕ್ಷಣಗಳಿದ್ದರೂ ಭಾರೀ ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದೆ. ಮುಂಗಾರು ದುರ್ಬಲತೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಿಪರ್ ಜಾಯ್ ಚಂಡಮಾರುತದ ಹಿನ್ನಲೆಯಲ್ಲಿ ಅರಬ್ಬೀ ಸಮುದ್ರ ಪ್ರಕ್ಷುಬ್ಧ ಗೊಂಡಿದೆ.
ಮಂಗಳೂರು ನಗರ ಹೊರವಲಯದ ಗುಡ್ಡಕೊಪ್ಪಲು ಕಡಲಕಿನಾರೆಯಲ್ಲಿರುವ ಭಗವತಿ ಪ್ರೇಮ್ ಡ್ರೆಜ್ಜಿಂಗ್ ಹಡಗಿಗೆ ಅಲೆಗಳು ಅಪ್ಪಳಿಸಿ ಆಳೆತ್ತರಕ್ಕೆ ಚಿಮ್ಮುತ್ತಿದ್ದು, ಅಲೆಗಳ ಅಬ್ಬರ ರುದ್ರ ರಮಣೀಯವಾಗಿದೆ. ಕಳೆದ ಆರು ತಿಂಗಳಿನಿಂದ ಹಡಗು ತೆರವು ಕಾರ್ಯಾಚರಣೆ ಮುಂಬೈ ಮೂಲದ ಕಂಪೆನಿ ನಡೆಸುತ್ತಿದ್ದು, ಮಳೆಗಾಲ ಆರಂಭದ ಹಿನ್ನಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಆದರೆ ಹಡಗು ಇನ್ನೂ ತೆರವು ಆಗದ ಹಿನ್ನಲೆಯಲ್ಲಿ ಸ್ಥಳೀಯರು ಕಂಪೆನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಡಗಿನಿಂದಾಗಿ ಸ್ಥಳೀಯ ಪ್ರದೇಶದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಅದಷ್ಟು ಬೇಗ ಹಡಗು ತೆರವು ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತದ ಪ್ರಭಾವದಿಂದ ಅರಬ್ಬೀ ಸಮುದ್ರದ ಅಲೆಗಳ ಎತ್ತರ ಮೂರರಿಂದ ನಾಲ್ಕು ಮೀಟರ್ ಎತ್ತರ ಇರಲಿದೆ ಎನ್ನುವ ಮಾಹಿತಿ ಇದೆ. ಹೀಗಾಗಿ ಮುಂದಿನ ಜೂನ್ 19ರವರೆಗೆ ಸಮುದ್ರಕ್ಕೆ ಪ್ರವಾಸಿಗರು, ಸ್ಥಳೀಯರು ಹಾಗೂ ಮೀನುಗಾರರು ಇಳಿಯಬಾರದು, ಸಮುದ್ರ ತೀರದಲ್ಲಿ ಆಟ ಆಡಬಾರದೆಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ