ಮಲ್ಪೆ, ಫೆಬ್ರವರಿ 15: ಬಾಪುತೋಟ ಬಳಿಯ ಮೀನುಗಾರಿಕೆ ಬಂದರಿನ ಸೇತುವೆ ಪಕ್ಕದ ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ಬೋಟಿನಲ್ಲಿ ಬುಧವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ. ಈ ದುರ್ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಮಲ್ಪೆಯ ಜನಾರ್ದನ ಟಿ. ಕಾಂಚನ್ ಅವರಿಗೆ ಸೇರಿದ "ರವಿಪ್ರಕಾಶ್" ಎಂಬ ಸಣ್ಣ ಟ್ರಾಲ್ ಬೋಟಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೀನುಗಾರಿಕೆ ಮುಗಿಸಿ ಬೋಟನ್ನು ದಡದಲ್ಲಿ ನಿಲ್ಲಿಸಿದ ನಂತರ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ದೋಣಿಯವರು ಬೆಂಕಿಯನ್ನು ಗಮನಿಸಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.
ಬೆಂಕಿ ಕಾಣಿಸಿಕೊಂಡ ಬೋಟಿನ ಸುತ್ತ ಸುಮಾರು 25ರಿಂದ 30 ಬೋಟುಗಳು ಇದ್ದವು. ಆದರೆ, ಸಮುದ್ರದ ನೀರಿನ ಉಬ್ಬರದಿಂದಾಗಿ ಬೆಂಕಿ ಬೇರೆ ಬೋಟುಗಳಿಗೆ ಹರಡದಂತೆ ತಡೆಯಲಾಯಿತು. ಒಂದು ವೇಳೆ ಬೆಂಕಿ ಹರಡಿದ್ದರೆ, ಭಾರೀ ಅನಾಹುತ ಸಂಭವಿಸುತ್ತಿತ್ತು.
ಬೆಂಕಿಗಾಹುತಿಯಾದ ಬೋಟಿನಲ್ಲಿ ಬಲೆಗಳು, 200 ಲೀಟರ್ ಡೀಸೆಲ್, ಜಿಪಿಎಸ್, ಫಿಶ್ ಫೈಂಡರ್, ಲೈಫ್ ಜಾಕೆಟ್, ವಾಟರ್ ಟ್ಯಾಂಕರ್, ಬಾಕ್ಸ್ ಸೇರಿದಂತೆ ಹಲವಾರು ಬೆಲೆಬಾಳುವ ವಸ್ತುಗಳು ಇದ್ದವು. ಇವೆಲ್ಲವೂ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ. ಅಂದಾಜಿನ ಪ್ರಕಾರ, ಸುಮಾರು 15 ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ