ಕಾರ್ಕಳ : ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮೃತರ ಪತ್ನಿ ಪ್ರತಿಮಾಳ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳ ಮತ್ತೊಮ್ಮೆ ತಿರಸ್ಕರಿಸಿ ಮಂಗಳವಾರ ಆದೇಶ ನೀಡಿದೆ.
ಕೆಲವು ದಿನಗಳ ಹಿಂದೆ ಪ್ರಕರಣದ ಇನ್ನೋರ್ವ ಆರೋಪಿ ದಿಲೀಪ್ ಹೆಗ್ಡೆಗೆ ಹೈಕೋರ್ಟ್ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಕಳೆದ ವಾರ ಪ್ರತಿಮಾ ಜಾಮೀನು ಕೋರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳ ಇಲ್ಲಿ ಅರ್ಜಿ ಸಲ್ಲಿಸಿದ್ದರು. ಎರಡನೇ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿರುವುದರಿಂದ ತನಗೂ ಜಾಮೀನು ನೀಡುವಂತೆ ಪ್ರತಿಮಾ ಕೋರಿಕೊಂಡಿದ್ದಳು.
ಇದಕ್ಕೆ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿಸಿ, ಎರಡನೇ ಆರೋಪಿಗೆ ಜಾಮೀನು ನೀಡಿದ್ದರೂ ಈಕೆಗೆ ಜಾಮೀನು ನೀಡಲು ಆಗುವುದಿಲ್ಲ. ಅವರಿಬ್ಬರ ಮೇಲಿನ ಆರೋಪಕ್ಕೆ ಸಾಮ್ಯತೆ ಇಲ್ಲ. ಆದುದರಿಂದ ಆಕೆಯ ಜಾಮೀನು ಅರ್ಜಿ ತಿರಸ್ಕಾರ ಮಾಡಬೇಕು ಎಂದು ವಾದಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಸಮಿವುಲ್ಲಾ, ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಈಕೆ ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಸೇರಿ 2024ರ ಅ.20ರಂದು ತನ್ನ ಪತಿ ಬಾಲಕೃಷ್ಣ ಪೂಜಾರಿ ಅವರನ್ನು ಕೊಲೆ ಮಾಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಅ.25ರಂದು ಅಜೆಕಾರು ಪೊಲೀಸರು ಬಂಧಿಸಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ