Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಭಾರತ-ಪಾಕ್ ಉದ್ವಿಗ್ನತೆ: ಯಕ್ಷಗಾನದಲ್ಲೂ ಪ್ರತಿಧ್ವನಿಸಿದ 'ಆಪರೇಷನ್ ಸಿಂಧೂರ'!

 


ಉಡುಪಿ, ಮೇ ೯: ಕರಾವಳಿಯ ಗಂಡುಕಲೆ ಎಂದೇ ಖ್ಯಾತಿವೆತ್ತ ಯಕ್ಷಗಾನ ಕೇವಲ ಪುರಾಣ ಕಥೆಗಳಿಗೆ ಸೀಮಿತವಾಗದೆ ಸಮಕಾಲೀನ ವಿಷಯಗಳಿಗೂ ಸ್ಪಂದಿಸುತ್ತಿದೆ. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಘ್ನ ಪರಿಸ್ಥಿತಿ ಹಾಗೂ ಭಾರತವು ನಡೆಸಿದ 'ಆಪರೇಷನ್ ಸಿಂಧೂರ'ದ ಕುರಿತಾದ ಸಂಭಾಷಣೆಯೊಂದು ಯಕ್ಷಗಾನದ ರಂಗಸ್ಥಳದಲ್ಲಿ ಕೇಳಿಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾವಂಜೆ ಮೇಳದ ಕಲಾವಿದ ದಿನೇಶ್ ಶೆಟ್ಟಿ ಅವರು ಆಪರೇಷನ್ ಸಿಂಧೂರದ ಕುರಿತು ಮಾತನಾಡುತ್ತಿರುವ ವಿಡಿಯೋವನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ದಿನೇಶ್ ಶೆಟ್ಟಿ ಅವರು, "ಈ ಪವಿತ್ರವಾದ ನೆಲದಲ್ಲಿ ನಾನು ಹುಟ್ಟಿದವನು. ಪವಿತ್ರವಾದ ಸಂಸ್ಕಾರವನ್ನು ಪಡೆದವನು. ಈ ನೆಲವನ್ನು ನಾವು ತಾಯಿಯೆಂದು ಕರೆಯುತ್ತೇವೆ. ತಾಯಿಯೆಂದು ಕರೆಯುವ ಈ ನೆಲ ಬಿಟ್ಟರೆ ನಮಗೆ ಬೇರೊಂದಿಲ್ಲ. ಹೀಗಾಗಿ ನಮಗೆ ದೇಶಪ್ರೇಮವನ್ನು ಕಲಿಸಿದೆ, ದೇಶದ್ರೋಹ ಮಾಡುವುದನ್ನಲ್ಲ" ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸ್ತ್ರೀ ವೇಷಧಾರಿಯೊಬ್ಬರು, "ಈ ತಾಯಿಯ ಸಿಂಧೂರ ಅಳಿಸಲು ಬಂದರೆ ಏನು ಮಾಡೋದು?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ದಿನೇಶ್ ಶೆಟ್ಟಿ ಅವರು, "ತಾಯಿಯ ಸಿಂಧೂರವನ್ನು ಒರೆಸುತ್ತೇನೆಂದು ಬಂದರೆ, ಈ ನೆಲದ ಒಬ್ಬಳು ಹೆಣ್ಣಿನ ಸಿಂಧೂರ ಒರೆಸಿದರೆ ವೈರಿಗಳ ಸಾವಿರಾರು ಮಡದಿಯಂದಿರ ಸಿಂಧೂರ ಅಳಿಸುವುದಕ್ಕೆ ನಾವೆಲ್ಲಾ ಸಿದ್ಧರಾಗಿ ನಿಂತಿದ್ದೇವೆ" ಎಂದು ದಿಟ್ಟ ಉತ್ತರ ನೀಡಿದ್ದಾರೆ.

ಕಲಾವಿದರ ಈ ದೇಶಭಕ್ತಿಪೂರಿತ ಮಾತುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಯಕ್ಷಗಾನದಂತಹ ಕಲೆಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಪ್ರಸ್ತುತ ವಿದ್ಯಮಾನಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ದೇಶಪ್ರೇಮವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo