ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಮಹಿಳೆಯೊಬ್ಬರ ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ತಾಲೂಕಿನ ಹುಟಕಮನೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬಂಧಿಸಿ ಬ್ರಹ್ಮಾವರ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.
ಬ್ರಹ್ಮಾವರದಲ್ಲಿ ಎ.26ರ ಶನಿವಾರ ಬೆಳಿಗ್ಗೆ ಗೋವಾ ಮೂಲದ, ಹಾಲಿ ಹುಬ್ಬಳ್ಳಿಯಲ್ಲಿ ವಾಸವಾಗಿರುವ ಮೊಯಿನುದ್ದೀನ್, ಸುಜೀತ ಹಾಗೂ ಗೌರೀಶ ಎಂಬ ಆರೋಪಿಗಳು ಮಹಿಳೆಯೊಬ್ಬರ ಸುಮಾರು 50 ಗ್ರಾಂ. ತೂಕದ ಕರಿಮಣಿ ಚೈನನ್ನು ಕಸಿದುಕೊಂಡು ಹೊಂಡಾ ಕಾರಿನಲ್ಲಿ ಪರಾರಿಯಾಗಿದ್ದರು.
ಇವರ ಕಾರನ್ನು ಬ್ರಹ್ಮಾವರ ಪೊಲೀಸರು ಹಿಂಬಾಲಿಸಿದ್ದರು. ಆರೋಪಿಗಳ ಕಾರು ಯಲ್ಲಾಪುರದ ಕಡೆಗೆ ಧಾವಿಸಿದ್ದನ್ನು ಕಂಡು ಯಲ್ಲಾಪುರ ಪೊಲಿಸರಿಗೆ ಮಾಹಿತಿ ನೀಡಲಾಗಿತ್ತು.
ಯಲ್ಲಾಪುರದಲ್ಲಿ ಅವರ ಕಾರನ್ನು ಪೊಲೀಸರು ತಡೆದಾಗ ಆರೋಪಿಗಳು ಕಾರನ್ನು ನಿಲ್ಲಿಸದೇ ಪರಾರಿಯಾದರು. ರಸ್ತೆಯ ಗಟಾರದಲ್ಲಿ ಕಾರಿನ ಚಕ್ರ ಸಿಲುಕಿದಾಗ ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ಅರಣ್ಯ ಪ್ರದೇಶದಲ್ಲಿ ನಾಪತ್ತೆ ಆಗಿದ್ದರು. ಗ್ರಾಮಸ್ಥರ ಸಹಕಾರದಿಂದ ಅರಣ್ಯ ಪ್ರದೇಶದಲ್ಲಿ ಹುಡುಕಿದಾಗ ಅವರು ಸಿಗಲಿಲ್ಲ. ನಂತರ ಮನೆಯೊಂದರ ಬಳಿ ಆರೋಪಿಗಳು ರಸ್ತೆ ಕುರಿತು ವಿಚಾರಿಸಿದಾಗ ಆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಆಗ ಸ್ಥಳಕ್ಕೆ ತೆರಳಿದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಅವರನ್ನು ಬ್ರಹ್ಮಾವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.