ಬೆಂಗಳೂರು: ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಒಂದು ಸಾವಿರ ಡಿ ಗ್ರೂಪ್ ನೌಕರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌ಅಶ್ವತ್ಥನಾರಾಯಣ ತಿಳಿಸಿದರು.
ವಿಧಾಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಶಿವಾನಂದ ಎಸ್.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ೧೨೫೦ ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿ ಪ್ರಾರಂಭವಾಗಿದೆ. ೧೨ ಸಾವಿರ ಅತಿಥಿ ಉಪನ್ಯಾಸಕರ ನೇಮಕವಾಗಿದೆ. ಕಾಲೇಜುಗಳಿಗೆ ರಾತ್ರಿ ಭದ್ರತಾ ಸಿಬ್ಬಂದಿ ಒದಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುವ ಶುಲ್ಕವನ್ನು ಆಯಾ ಕಾಲೇಜುಗಳ ಬ್ಯಾಂಕ್ ಖಾತೆಗಳಲ್ಲಿ ಜಮೆ ಮಾಡಲು ತೀರ್ಮಾನ ಮಾಡಲಾಗಿದೆ. ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಶಾಸಕರು ಶಿಕ್ಷಣದ ಬಗ್ಗೆ ಮಾತನ್ನೇ ಆಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಅತಿಥಿ ಉಪನ್ಯಾಸಕರ ನೇಮಕವಾಗಿದೆ. ಆದರೆ ವಾಚ್‌ಮನ್, ಅಟೆಂಡರ್ ಸೇರಿದಂತೆ ಡಿ ಗ್ರೂಪ್ ಹುದ್ದೆಗಳು ಭರ್ತಿಯಾಗಬೇಕು. ನಮ್ಮ ಕ್ಷೇತ್ರದ ಸರ್ಕಾರಿ ಕಾಲೇಜಿನಲ್ಲಿ ೩ ಸಾವಿರ ವಿದ್ಯಾರ್ಥಿಗಳು ಇದ್ದು ೧೩೦ ಅತಿಥಿ ಉಪನ್ಯಾಸಕರಿದ್ದಾರೆ. ಶೇ.90ರಷ್ಟು ಫಲಿತಾಂಶ ಬರುತ್ತಿದೆ. ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಶಿವಾನಂದ ಪಾಟೀಲ್, ಮೀಸಲಿಟ್ಟ ಹಣ ಖರ್ಚಾಗುತ್ತಿಲ್ಲ ಎಂದಾಗ, ಅನುದಾನದ ಹಣವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸಚಿವರು ಹೇಳಿದರು. ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಇಲಾಖೆ ಬೇಡಿಕೆಗಳ ಬಗ್ಗೆ ಮಾತನಾಡುವಾಗ ಶಿಕ್ಷಣದ ಬಗ್ಗೆಯೂ ಮಾತನಾಡಬಹುದಾಗಿದೆ ಎಂದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ