Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮಂಗಳೂರು ವಿಶ್ವವಿದ್ಯಾನಿಲಯ ಅಂಕಪಟ್ಟಿ ವಿತರಣೆ ಹಾಗೂ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ ಖಂಡಿಸಿ ಎಬಿವಿಪಿ ಪ್ರತಿಭಟನೆ 18-3-2022

ಮಂಗಳೂರು ವಿಶ್ವವಿದ್ಯಾನಿಲಯ ಅಂಕಪಟ್ಟಿ ಹಾಗೂ ಫಲಿತಾಂಶ ಪ್ರಕಟಣೆಯಲ್ಲಿ ಮಾಡಿರುವ ವಿಳಂಬದಿಂದಾಗಿ ವಿದ್ಯಾರ್ಥಿಗಳಿಗೆ ಉಂಟಾಗಿದ್ದ ಹಲವು ಸಮಸ್ಯೆಗಳನ್ನು ಮುಂದಿಟ್ಟು ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಣಾಜೆಯ ವಿ.ವಿ ಕ್ಯಾಂಪಸ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವಾರು ಶೈಕ್ಷಣಿಕ ಸಮಸ್ಯೆಗಳು ತಲೆದೋರಿದ್ದು ಇಲ್ಲಿನ ಸ್ನಾತಕೋತ್ತರ ವಿಭಾಗದ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇನ್ನೂ ನೋಂದಣಿ ಸಂಖ್ಯೆಯನ್ನು ನೀಡಲಾಗಿಲ್ಲ ಇದು ಎಸ್.ಎಸ್.ಪಿ ವಿದ್ಯಾರ್ಥಿವೇತನ ಸಲ್ಲಿಸಲು ಸಮಸ್ಯೆಯಾಗಿ ಪರಿಣಮಿಸುತ್ತಿದೆ. 

ಈ ಹಿಂದೆ ತೇರ್ಗಡೆಯಾದ ವಿದ್ಯಾರ್ಥಿಗಳ ಅಂಕಪಟ್ಟಿಯ ವಿತರಣೆಯೂ ವಿಳಂಬವಾಗುತ್ತಿದ್ದು ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣಪತ್ರ ಪಡೆಯಲು ಸಮಸ್ಯೆಯಾಗುತ್ತಿದೆ. ಪ್ರಸ್ತುತ ತೃತೀಯ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ದ್ವಿತೀಯ ಸೆಮಿಸ್ಟರ್ ನ ಫಲಿತಾಂಶ ಇನ್ನೂ ಬಂದಿರುವುದಿಲ್ಲ. 

ಈ ಎಲ್ಲಾ ಸಮಸ್ಯೆಗಳ ಕುರಿತಾಗಿ ಈಗಾಗಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಇನ್ನೂ ಸಮಸ್ಯೆಗಳು ಬಗೆಹರಿದಿಲ್ಲ ಎನ್ನುವ ಕಾರಣದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ನಗರ ಘಟಕದ ವತಿಯಿಂದ ಇಂದು ಮಂಗಳೂರು ವಿ.ವಿ ಮಂಗಳಗಂಗೋತ್ರಿಯ ವಿಜ್ಞಾನ ಸಂಕೀರ್ಣದ ಮುಖ್ಯ ದ್ವಾರ ಎದುರು ಅಭಾವಿಪ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.

ಬೆಳಗ್ಗೆ 9:30 ಕ್ಕೆ ಪ್ರತಿಭಟನೆ ಶುರುವಾದ ಕೆಲವೇ ಕ್ಷಣಗಳಲ್ಲಿ 300 ರಿಂದ 400 ವಿದ್ಯಾರ್ಥಿಗಳು ಸ್ಥಳಕ್ಕಾಗಮಿಸಿ ಪ್ರತಿಭಟನೆಗೆ ಬೆಂಬಲಿಸಿದರು. ವಿದ್ಯಾರ್ಥಿಗಳು ಫಲಕಗಳನ್ನು ಹಿಡಿಯುತ್ತಾ ದ್ವಾರದ ಎದುರು ಪ್ರತಿಭಟನಕಾರರ ಸಂಖ್ಯೆ ಹೆಚ್ಚುತ್ತಲೇ ಇರುವ ವಿಷಯ ತಿಳಿದ ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೋ. ಪಿ.ಎಲ್ ಧರ್ಮ ಅವರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. 

ಇದಾದ ನಂತರ ಮಾತನಾಡಿದ ಅವರು ಮಂಗಳೂರು ವಿ.ವಿ ನಾಳೆಯಿಂದಲೇ 2020-21 ನೇ ಸಾಲಿನ ಪದವಿ ಹಾಗೂ ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವ ಕೆಲಸ ಮಾಡುತ್ತಿದೆ ಹಾಗೂ ಎಸ್.ಎಸ್.ಪಿ ಹಾಗೂ ಇನ್ನಿತರ ಶೈಕ್ಷಣಿಕ ವಿಚಾರಗಳಿಗೆ ಅಗತ್ಯವಾದ ಸ್ನಾತಕೋತ್ತರ ತರಗತಿಯ ದ್ವಿತೀಯ ಸೆಮಿಸ್ಟರ್ ಈ ವಾರದೊಳಗೆ ಸಂಪೂರ್ಣ ಫಲಿತಾಂಶ ಪ್ರಕಟಿಸುವ ಭರವಸೆಯನ್ನು ನೀಡಿದರು. 

ವಿಳಂಬಕ್ಕೆ ವಿ.ವಿಯ ಹೊಸ ಸಾಫ್ಟ್ ವೇರ್ ಕಾರಣ ಎನ್ನುವುದನ್ನೂ ಅವರು ಸ್ಥಳದಲ್ಲಿ ಉಲ್ಲೇಖಿಸಿದರು. ಇದಾದ ಬಳಿಕ ಅಭಾವಿಪ ಕಾರ್ಯಕರ್ತರು ಪರೀಕ್ಷಾಂಗ ಕುಲಸಚಿವರಿಗೆ ಮನವಿ ಸಲ್ಲಿಸಿದರು ಹಾಗೇ ಸಮಸ್ಯೆ ಬಗೆಹರಿಯದಿದ್ದಲ್ಲಿ ಸಿಂಡಿಕೇಟ್ ಸಭೆ ನಡೆಯುವ ದಿನ ಬೃಹತ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo