ಉಡುಪಿ: ಸಿಎಂ ಬೊಮ್ಮಾಯಿ ಅವರು ಪ್ರಾಯಶ್ಚಿತ ಹಾಗೂ ಕಳೆದ ನಾಲ್ಕು ವರ್ಷಗಳಲ್ಲಿನ ದುರಾಡಳಿತ, ದೌರ್ಜನ್ಯ ಹಾಗೂ ಅನಾಹುತ ಮಾಡಿರುವುದಕ್ಕೆ ಕ್ಷಮೆಯಾಚನೆಗಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ಪ್ರತಿ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಮಾವೇಶ ಮಾಡಲು ಉದ್ದೇಶಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ 30 ಮಂದಿ ಸ್ಟಾರ್ ಕ್ಯಾಂಪೇನರ್ ಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಅದರಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರುಗಳಿರುತ್ತಾರೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಅಶೋಕ್ ಗೆಹ್ಲಟ್ ಮೊದಲಾದವರು ಇರುತ್ತಾರೆ ಎಂದು ಅವರು ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ನೆರೆ ಬಂದಾಗ ರಾಜ್ಯಕ್ಕೆ ಬರಲಿಲ್ಲ. ಕೊರೋನಾ ಸಂದರ್ಭ ಆಕ್ಸಿಜನ್ ಇಲ್ಲದೆ ಜನರು ಸತ್ತಾಗ ಬರಲಿಲ್ಲ.ಈಗ ಚುನಾವಣೆ ಬಂದಾಗ ಅದೇ ಜಿಲ್ಲೆಗೆ ಹುಲಿ ಸಫಾರಿ ಮಾಡಲು ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ರಮೇಶ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ