ಪೌರಾಣಿಕ ಹಿನ್ನೆಲೆ
ಶ್ರೀಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಳಿಯಾ ನಾಗನನ್ನು ಮರ್ದನ ಮಾಡಿದ ದಿವಸ. ಅದೇ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಬಾಲ ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದಾಗ ಚೆಂಡು ನದಿ ದಂಡೆಯಲ್ಲಿದ್ದ ಮರದ ಕಾಂಡದಲ್ಲಿ ಸಿಕ್ಕಿ ಹಾಕಿಕೊಂಡಿತು. ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಕೃಷ್ಣನು ಜಾರಿ ನದಿಯಲ್ಲಿ ಬಿದ್ದನು. ಯುಮುನಾ ನದಿಯಲ್ಲಿ ಕಾಳಿ ಎಂಬ ನಾಗ ವಾಸವಾಗಿದ್ದು, ವಿಷಭರಿತವಾಗಿರುತ್ತದೆ. ಕೃಷ್ಣ ನದಿಗೆ ಬಿದ್ದಾಗ ಕಾಳಿಯ ಎಂಬ ಹಾವು ಅವನ ಮೇಲೆ ದಾಳಿ ಮಾಡುತ್ತದೆ. ಆಗ ಕೃಷ್ಣನು ಕಾಳಿಯ ವಿರುದ್ಧ ಹೋರಾಟ ಮಾಡುತ್ತಾನು, ಈ ವೇಳೆ ಕಾಳಿಯ ಹಾವಿಗೆ ಕೃಷ್ಣನು ಸಾಮಾನ್ಯ ಬಾಲಕನಲ್ಲ ಎಂದು ಅರಿವಿಗೆ ಬರುತ್ತದೆ. ಆಗ ಕಾಳಿಯ ಹಾವು ಕೃಷ್ಣನನ್ನು ತನ್ನನ್ನು ಕೊಲ್ಲಬೇಡವೆಂದು ಕೇಳಿಕೊಳ್ಳುತ್ತದೆ. ಕಾಳಿಯನ್ನು ಕ್ಷಮಿಸಿದ ಕೃಷ್ಣನು ಜನರಿಗೆ ತೊಂದರೆ ಮಾಡಬೇಡ ಎಂದು ಬುದ್ಧಿವಾದ ಹೇಳಿ ಆ ಹಾವನ್ನು ಬಿಟ್ಟು ಬಿಡುತ್ತಾನೆ. ಹೀಗಾಗಿ, ಕೃಷ್ಣನು ಕಾಳಿಯಾ ನಾಗನನ್ನು ಮರ್ದನ ಮಾಡಿದ ದಿವಸದಂದು ನಾಗರಪಂಚಮಿ ಮಾಡಲಾಗುತ್ತದೆ.
ಇನ್ನು ಮತ್ತೊಂದು ಕಥೆಯೆಂದರೆ, ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ರಾಜ ಜನಮೇಜಯ ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು 'ಸರ್ಪಯಜ್ಞ'ವನ್ನು ಮಾಡಲು ಆರಂಭಿಸುತ್ತಾನೆ. ಆ ಯಜ್ಞಕ್ಕೆ ಎಲ್ಲಾ ಸರ್ಪಗಳು ಬಂದು ಬೀಳುತ್ತಿರುತ್ತವೆ. ಈ ಸಂದರ್ಭದಲ್ಲಿ ಸರ್ಪಗಳು ಪ್ರಾರ್ಥನೆ ಮಾಡಿಕೊಂಡಾಗ ಆಸ್ತಿಕ ಮುನಿಗಳು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಸಿಕೊಳ್ಳುತ್ತಾರೆ. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕ ಮುನಿಗಳು ಪ್ರಾಣಿಹಿಂಸೆ ಮಹಾಪಾಪವಾಗಿದ್ದು, ನೀವು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ಕೂಡಲೇ ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಳ್ಳುತ್ತಾರೆ. ರಾಜ ಜನಮೇಜಯನು ಆಸ್ತಿಕ ಮುನಿಗಳ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸುತ್ತಾನೆ. ಆ ನಿಲ್ಲಿಸಿದ ದಿನವನ್ನೇ ನಾಗರಪಂಚಮಿ ಎಂದು ಕರೆಯಲಾಗುತ್ತದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ