ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಮುಖ ಆರೋಪಿ ಹಾಗೂ ಈ ಪ್ರಕರಣದ ಕೇಂದ್ರಬಿಂದುವಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದ ಮೇಲೆ ಬುಧವಾರ ದಾಳಿ ನಡೆಸಿದೆ.
ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಗುರುತಿಸಿಕೊಂಡಿದ್ದ ಚಿನ್ನಯ್ಯ ಎಂಬಾತ ಈಗ ಆರೋಪಿಯಾಗಿ ಬದಲಾಗಿದ್ದಾನೆ. ಆತನ ಹೇಳಿಕೆಗಳ ಆಧಾರದ ಮೇಲೆ ಎಸ್‌ಐಟಿ ಪೊಲೀಸರು ನ್ಯಾಯಾಲಯದಿಂದ ಶೋಧ ವಾರಂಟ್ (ಸರ್ಚ್ ವಾರಂಟ್) ಪಡೆದು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಗೆ ಕಾರಣವೇನು?
ಆರೋಪಿ ಚಿನ್ನಯ್ಯ ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, "ಎಸ್‌ಐಟಿ ಉತ್ಖನನ ಮುಗಿದ ನಂತರ ನಾನು ತಿಮರೋಡಿ ಅವರ ನಿವಾಸಕ್ಕೆ ತೆರಳಿದ್ದೆ. ಅಲ್ಲಿ ನನಗೆ ಪ್ರತ್ಯೇಕ ಕೊಠಡಿಯನ್ನು ನೀಡಲಾಗಿತ್ತು. ಆ ಕೊಠಡಿಯಲ್ಲಿ ನಾನು ನನ್ನ ಬಟ್ಟೆಗಳು ಮತ್ತು ಒಂದು ಬ್ಯಾಗ್ ಇಟ್ಟಿದ್ದೇನೆ. ನಾನು ಮೊಬೈಲ್ ಬಳಸುತ್ತಿರಲಿಲ್ಲ. ನನ್ನ ಮೊಬೈಲ್ ತಿಮರೋಡಿ ಅವರ ಬಳಿ ಇತ್ತು," ಎಂದು ತಿಳಿಸಿದ್ದಾನೆ. ಈ ಹೇಳಿಕೆಗಳ ಹಿನ್ನೆಲೆಯಲ್ಲಿ, ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ಮತ್ತು ಆತನ ಮೊಬೈಲ್ ಅನ್ನು ವಶಪಡಿಸಿಕೊಳ್ಳಲು ಪೊಲೀಸರು ಈ ದಾಳಿ ನಡೆಸಿದ್ದಾರೆ.
ಮಾಧ್ಯಮಗಳ ವಾಹನಗಳಿಗೆ ತಡೆ
ಪೊಲೀಸ್ ತಂಡ ತಿಮರೋಡಿ ಅವರ ನಿವಾಸದತ್ತ ತೆರಳುತ್ತಿದ್ದಾಗ, ಮಾಧ್ಯಮಗಳ ವಾಹನಗಳು ಸಹ ಅವರನ್ನು ಹಿಂಬಾಲಿಸಿದ್ದವು. ಆದರೆ, ತಿಮರೋಡಿ ನಿವಾಸಕ್ಕೆ ತಲುಪುವ ಒಂದು ಕಿಲೋಮೀಟರ್ ದೂರದಲ್ಲೇ ಪೊಲೀಸರು ಎಲ್ಲಾ ಮಾಧ್ಯಮಗಳ ವಾಹನಗಳನ್ನು ತಡೆದು ನಿಲ್ಲಿಸಿದರು. ದಾಳಿ ಕಾರ್ಯಾಚರಣೆಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ