ಮಂಗಳೂರು: ನಾಗಾರಾಧನೆಗೆ ಹೆಸರುವಾಸಿಯಾದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ವೈಭವಕ್ಕೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್1 ರಂದು ಕೊಪ್ಪರಿಗೆ ಏರುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಮಹೋತ್ಸವ ಆರಂಭವಾದರೆ, ಡಿಸೆಂಬರ್.15 ರಂದು ಕೊಪ್ಪರಿಗೆ ಇಳಿಸುವುದರ ಮೂಲಕ ಜಾತ್ರಾ ಉತ್ಸವ ಸಮಾಪನಗೊಳ್ಳಲಿದೆ.
ಡಿ.9ರಂದು ಚಂಪಾಷಷ್ಠಿಯ ವೈಭವದ ಪ್ರಯುಕ್ತ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ಜರುಗಲಿದೆ. ಖ್ಯಾತ ಉದ್ಯಮಿ ದಿ.ಮುತ್ತಪ್ಪ ರೈ ಸೇವಾ ರೂಪದಲ್ಲಿ ಕೊಡಮಾಡಲ್ಪಟ್ಟ ಬ್ರಹ್ಮರಥದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರು ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ಭಾಗ್ಯ ನೀಡಲಿದ್ದಾನೆ. ಚಂಪಾಷಷ್ಠಿಯ ಈ ವೈಭವ ಕಾಣಲು, ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿಸೆಂಬರ್.1 ರಂದು ಜಾತ್ರೆ ಆರಂಭವಾಗಿ ಡಿಸೆಂಬರ್.3 ರಂದು ಲಕ್ಷದೀಪೋತ್ಸವ, ಡಿಸೆಂಬರ್.7 ರಂದು ಚೌತಿ ಹೂವಿನ ತೇರಿನ ಉತ್ಸವ, ಡಿಸೆಂಬರ್.8 ರಂದು ಪಂಚಮಿ ರಥೋತ್ಸವ, ಡಿಸೆಂಬರ್.9 ರ ಬೆಳಗ್ಗೆ ಚಂಪಾಷಷ್ಠಿ ಬ್ರಹ್ಮ ರಥೋತ್ಸವ, ಡಿಸೆಂಬರ್.10 ರಂದು ಅವಭ್ರಥೋತ್ಸವ ಮತ್ತು ನೌಕಾ ವಿಹಾರ ಕ್ಷೇತ್ರದಲ್ಲಿ ನಡೆಯಲಿದೆ.
ಡಿ.15ರಂದು ಕೊಪ್ಪರಿಗೆ ಇಳಿಸುವುದರ ಮೂಲಕ ಜಾತ್ರೆ ಸಮಾಪನವಾಗುತ್ತದೆ. ಆ ದಿನ ರಾತ್ರಿ ದೇವಾಲಯದಲ್ಲಿ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿದೆ. ಈ ವೇಳೆ ಕ್ಷೇತ್ರದ ಗಜರಾಣಿ ಯಶಸ್ವಿ ದೇವಳದ ಆವರೊಣದೊಳಗೆ ನೀರಿನಲ್ಲಿ ಮಕ್ಕಳೊಂದಿಗೆ ಆಡುವುದನ್ನು ಕಾಣುವುದೇ ಕಣ್ಣಿಗೆ ಹಬ್ಬವಾಗಿದೆ. ಕಳೆದ ಬಾರಿ ಕರೋನ ಇದ್ದ ಕಾರಣ ಸರಳವಾಗಿ ನಡೆದಿದ್ದ ಚಂಪಾಷಷ್ಠಿ ಉತ್ಸವ ಈ ಬಾರಿ ವಿಜೃಂಭಣೆಯಿಂದ ನಡೆಯಲಿದೆ.
ದಿನರಾತ್ರಿ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿದ್ದು ಪುರುಷರಾಯ, ಹೊಸಳಿಗಮ್ಮ, ಹಾಗೂ ಪರಿವಾರ ದೈವಗಳ ನಡವಳಿ ನಡೆಯಲಿದೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ