ಜ್ಯೋತಿಷ್ಯರತ್ನ ಕಿಲ್ಪಾಡಿ ಗೋವಿಂದ ಭಟ್ ಜೀವನ ಅನುಕರಣೀಯ ತಂದೆಯೇ ಧರ್ಮ, ತಂದೆಯೇ ಸ್ವರ್ಗ, ತಂದೆಯೇ ಸವೋಚ್ಚತ್ಯಾಗ, ವಿಶ್ವದ ಶ್ರೇಷ್ಠ ಪೀಠಗಳಿಗಿಂತಲೂ ಶ್ರೇಷ್ಠ ಪೀಠ ಎಂದರೆ ಪಿತೃ ಪೀಠ, ಅದರಲ್ಲೂ ಸಾಧನಾಶೀಲ ಪಿತಾ ಸಿಗುವುದು ಎಂದರೆ ಪುಣ್ಯ, ಅಂತಹ ಪುಣ್ಯವಂತರು ನಾವು ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞ, ಆಧ್ಯಾತ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಮೂಲ್ಕಿಯ ಕಿಲ್ಪಾಡಿಯಲ್ಲಿ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ನಡೆದ ಜ್ಯೋತಿಷ್ಯರತ್ನ ಕಿಲ್ಪಾಡಿ ಗೋವಿಂದ ಭಟ್ ಅವರ 7ನೇ ವರ್ಷದ ಪುಣ್ಯ ಸ್ಮರಣ ವಿಶೇಷ ಉಪನ್ಯಾಸ ಹಾಗೂ ಬಡ ಬ್ರಾಹ್ಮಣ ಕುಟುಂಬಕ್ಕೆ ಆರ್ಥಿಕ ಸಹಾಯ ವಿತರಿಸಿ ಅವರುಮಾತನಾಡಿದರು. ಬೆಂಗಳೂರಿನ 5 ಹಾಗೂ ಮೂಲ್ಕಿಯ 4 ಹೀಗೆ ಒಟ್ಟು 9 ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲಾಯಿತು.
ಕಿಲ್ಪಾಡಿ ಗೋವಿಂದ್ ಭಟ್ ಅವರು ಜ್ಯೋತಿಷ್ಯ ಶಾಸ್ತ್ರವನ್ನು ಸಂಪೂರ್ಣ ಮನನ ಮಾಡಿ, ಅವುಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಕೆಲವೊಂದು ಮಂದಿ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಮಾಡುತ್ತಿದ್ದ ಅಪಚಾರದಿಂದಾಗಿ ಜನರಲ್ಲಿ ಮೂಡಿದ್ದ ಅಪನಂಬಿಕೆಯನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಯಾವುದೇ ಕ್ಷೇತ್ರದ ಬಗ್ಗೆ ಪೂರ್ಣ ಜ್ಞಾನ ಇದ್ದರೆ ಮಾತ್ರ ಅಪನಂಬಿಕೆಯನ್ನು ಹೋಗಲಾಡಿಬಹುದಾಗಿದೆ. ಜನರ ಪ್ರಶ್ನೆಗಳಿಗೆ ತರ್ಕಬದ್ದವಾಗಿ ಉತ್ತರ ನೀಡಿದರೆ ಅಪನಂಬಿಕೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಭಾರತೀಯ ಜ್ಯೋತಿಷ್ಯ ಶಾಸ್ತ್ರವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವಲ್ಲಿ ಕಿಲ್ಪಾಡಿ ಗೋವಿಂದ ಭಟ್ ಅವರ ಪಾತ್ರ ಹಿರಿದಾಗಿದೆ ಎಂದರು.
ಕಿಲ್ಪಾಡಿ ಗೋವಿಂದ್ ಭಟ್ ಅವರ ಜೀವನವೇ ಒಂದು ಅಧ್ಯಯನ ಗ್ರಂಥ. ಅವರ ಸಲಹೆಗಾಗಿ ಬಂದವರ ಬಗ್ಗೆ ಸಮಗ್ರ ಚಿಂತನೆ ನಡೆಸಿ ನೀಡುತ್ತಿದ್ದ ಪರಿಹಾರ ಮತ್ತು ಪರಿಣಾಮದಿಂದಾಗಿಯೇ ಅವರು ಜನಜನಿತರಾಗಿದ್ದರು. ಇದರಿಂದಾಗಿ ನಾಡಿನ ಮೂಲೆ ಮೂಲೆಗಳಿಂದ ಜನರು ಚಿಂತನೆ ಮಾಡಲು ಬರುತ್ತಿದ್ದರು. ಇದರಿಂದಾಗಿ ಸಾವಿರಾರು ಕುಟುಂಬದಲ್ಲಿ, ಜೀವನದಲ್ಲಿ ನಂದಾದೀಪ ಮೂಡಿಸಿದ ಶ್ರೇಷ್ಠ ಸರಳ ವ್ಯಕ್ತಿತ್ವ ಅವರದ್ದು ಎಂದು ಬಣ್ಣಿಸಿದರು.ಗೀತೆಯ ಸಾರದಂತೆ ಪ್ರಕೃತಿಯಿಂದ ಬಂದಿರುವ ಸಹಜ ಕರ್ಮಗಳಾದ ಶಮ, ದಮ, ತಪಸ್ಸು, ಶುಚಿತ್ವ, ಕ್ಷಮೆ, ಸರಳತೆ, ಜ್ಞಾನ, ವಿಜ್ಞಾನ, ಅಸ್ತಿಕ್ಯ, ಬುದ್ದಿ ಹೀಗೆ ಹತ್ತು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಸಾಧಿಸಿದ ಜ್ಯೋತಿಷ್ಯ ರತ್ನ ಕಿಲ್ಪಾಡಿ ಗೋವಿಂದ ಭಟ್ ಅವರ ಜೀವನ ಅನುಕರಣೀಯ. ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವುಮುಂದುವರಿಯುತ್ತಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ರಜನಿ ಸಿ ಭಟ್ ರೋಶನಿ ಸಿ ರಾಹುಲ್ ಸಿ. ಭಟ್, ಭಟ್, ಮಾತೃಶ್ರೀ ಶಾರದಮ್ಮ ಗೋವಿಂದ ಭಟ್, ವಿಶ್ವನಾಥ ಭಟ್, ಉಷಾಶ್ರೀ ಭಟ್,ಪುಷ್ಪ ಸಂಪತ್ ಕುಮಾರ್,ಕುಸುಮ ನಾಗರಾಜ್, ಅನುಶ್ರೀ ಆಚಾರ್ಯ , ಹರ್ಷಿತಾ ಭಟ್ ಪ್ರಜ್ವಲ್ ವಿ ಭಟ್, ಭಟ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ರಾಜೇಶ್ ಭಟ್, ವೀಣಾ ರಾಜೇಶ್ ಭಟ್,ಸ್ವಾತಿ ಆಚಾರ್ಯ, ಸ್ವಸ್ತಿಕ್ ಆಚಾರ್ಯ ಕುಮಾರಿ ಐಶ್ವರ್ಯ, ಸೌಂದರ್ಯ, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಉಪಸ್ಥಿತರಿದ್ದರು. ವಿಶೇಷ ಉಪನ್ಯಾಸದಲ್ಲಿ ಕಿಲ್ಪಾಡಿ ಗೊವಿಂದ ಭಟ್ ಅವರ ಶಿಷ್ಯವೃಂದ ಅಭಿಮಾನಿಗಳು ಭಾಗವಹಿಸಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ