ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿರುವಂತೆ ಎಲ್ಲಾ ರಾಜಕೀಯ ಪಕ್ಷಗಳು ಈಗಿನಿಂದಲೇ ಭರ್ಜರಿ ತಾಲೀಮು ನಡೆಸುತ್ತಿವೆ. ಒಂದೆಡೆ ಭಾರತೀಯ ಜನತಾ ಪಾರ್ಟಿ (BJP) ಜನಸಂಕಲ್ಪ ಯಾತ್ರೆಯ ಮೂಲಕ ಚುನಾವಣೆಗೆ ತಯಾರಿ ನಡೆಸುತ್ತಿದ್ದರೆ , ಇತ್ತ ಕಾಂಗ್ರೆಸ್ ಕೂಡಾ ಹಿಂದೆ ಬಿದ್ದಿಲ್ಲ, ರಾಜ್ಯ ಕಾಂಗ್ರೆಸ್ ಈಗಿನಿಂದಲೇ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿದೆ.
ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡುವಲ್ಲಿ ಯಾವುದೇ ಗೊಂದಲ ವಾಗಬಾರದೆದಂದು ಹೊಸ ಪ್ಲಾನ್ ರೂಪಿಸಿದ್ದು , ಟಿಕೆಟ್ ಪಡೆಯಲು ಬಯಸುವ ಆಕಾಂಕ್ಷಿಗಳು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಾಗಿದೆ . ಕೊನೆಗೆ ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೇಟ್ ನೀಡುವ ಯೋಜನೆ ರೂಪಿಸಿದೆ.
ಹೀಗಾಗಿ ಉಡುಪಿ ವಿಧಾನಸಭಾ ಚುನಾವಣಾ ಟಿಕೆಟ್‌ಗಾಗಿ ನಾಲ್ವರು ಆಕಾಂಕ್ಷಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಉದ್ಯಮಿ ಕೃಷ್ಣಮೂರ್ತಿ ಆಚಾರ್ಯ, ಅಮೃತ್ ಶೆಣೈ, ಹಾಗೂ ಪ್ರಖ್ಯಾತ್ ಶೆಟ್ಟಿ ಅರ್ಜಿ ಸಲ್ಲಿಸಿದ್ದಾರೆ. ನಾಲ್ವರಲ್ಲಿ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ನಾಲ್ವರು ಆಕಾಂಕ್ಷಿಗಳ ಹಿನ್ನೆಲೆ ನೋಡೋದಾದ್ರೆ:-
1. ರಮೇಶ್ ಕಾಂಚನ್:-ರಮೇಶ್ ಕಾಂಚನ್ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರಾಗಿ ಗುರುತಿಸಿ ಕೊಂಡಿದ್ದಾರೆ. ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ನಗರ ಸಭಾ ಸದಸ್ಯರೂ ಆಗಿದ್ದಾರೆ. ಉಡುಪಿ ನಗರಸಭಾ ವಿರೋಧ ಪಕ್ಷದ ನಾಯಕರು, ಜೊತೆಗೆ ಹಲವಾರು ಹೋರಾಟ, ಪ್ರತಿಭಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
2. ಅಮೃತ್ ಶೆಣೈ:-ಅಮೃತ್ ಶೆಣೈ ಉತ್ತಮ ವಾಗ್ಮಿ,ಜೊತೆಗೆ ಸಿದ್ದಾಂತ ಬದ್ಧ ರಾಜಕಾರಣಿ, ಕಾಂಗ್ರೆಸ್ ಪಕ್ಷದ ಎಂತಹ ಕಷ್ಟದ ಸಂಧರ್ಭದಲ್ಲೂ ತಮ್ಮ ಪಕ್ಷದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಅತ್ಯಂತ ಹಿರಿಯ ಕಾಂಗ್ರೆಸ್ ಮುಖಂಡ, ಸದ್ಯ ಕೆಪಿಸಿಸಿ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಜೊತೆಗೆ ಕಾಂಗ್ರೆಸ್ ಹಿರಿಯ ಮುಖಂಡರ ಜೊತೆ ಉತ್ತಮ ಒಡನಾಟ ಕೂಡಾ ಇವರಿಗಿದೆ.
3.ಕೃಷ್ಣಮೂರ್ತಿ ಆಚಾರ್ಯ:-ಕೃಷ್ಣಮೂರ್ತಿ ಆಚಾರ್ಯ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಸಮಾಜ ಸೇವೆ, ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಕೋವಿಡ್ ಲಾಕ್‌ಡೌನ್ ಸಂಧರ್ಭದಲ್ಲಿ ಹಲವಾರು ಬಡವರಿಗೆ ನೆರವನ್ನು ನೀಡಿದ್ದಾರೆ. ಇವರ ಪತ್ನಿ ಪ್ರಸ್ತುತ ನಗರಸಭಾ ಸದಸ್ಯರಾಗಿದ್ದಾರೆ.
4. ಪ್ರಖ್ಯಾತ್ ಶೆಟ್ಟಿ:-ಪ್ರಖ್ಯಾತ್ ಶೆಟ್ಟಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದಾರೆ, ಜೊತೆಗೆ ತೆಂಕನಿಡಿಯೂರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಇನ್ನು ಯುವ ಉದ್ಯಮಿ ಪ್ರಸಾದ್ ಕಾಂಚನ್ ಕೂಡಾ ಸದ್ಯದಲ್ಲೇ ಅರ್ಜಿ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಕೂಡಾ ಇದೆ. ಇವರಲ್ಲಿ ಯಾರಿಗೆ ಟಿಕೆಟ್ ಒಲಿಯಲಿದೆ ಎನ್ನುವ ಕುತೂಹಲ ಸದ್ಯ ಉಡುಪಿ ಕಾಂಗ್ರೆಸ್ ವಲಯದಲ್ಲಿದೆ.
ಸದ್ಯದ ಉಡುಪಿ ರಾಜಕೀಯ ಚಿತ್ರಣ ಹೇಗಿದೆ..??
ಬಿಜೆಪಿಯ ಭದ್ರ ಕೋಟೆ ಎಂದೇ ಗುರುತಿಸಿರುವ ಉಡುಪಿ ಕ್ಷೇತ್ರದಲ್ಲಿ ಹಾಲಿ ಶಾಸಕ ರಘುಪತಿ ಭಟ್ ಅವರ ಮೇಲೆ ಯಾವುದೇ ರೀತಿಯ ಗಂಭೀರ ಆರೋಪಗಳಿಲ್ಲ, ಜೊತೆಗೆ ಭ್ರಷ್ಟಾಚಾರದ ಆರೋಪ ಕೂಡಾ ಕೇಳಿ ಬಂದಿಲ್ಲ, ಜೊತೆಗೆ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿರುವುದು, ಬಿಜೆಪಿಗೆ ಮತ್ತಷ್ಟು ಬಲ ತುಂಬಿದೆ. ಜೊತಗೆ ಉಡುಪಿಯಲ್ಲಿ ಬಿಜೆಪಿಗೆ ಪ್ರಬಲವಾದ ಕಾರ್ಯಕರ್ತರ ಬಲ ಕೂಡಾ ಇದೆ. ಇನ್ನು ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟ ನಿಲುವು ತಾಳದಿರುವುದು, ಹಿನ್ನಡೆಯಾಗುವ ಸಾಧ್ಯತೆ ಎಂದು ರಾಜಕೀಯ ವಲಯದ ಚರ್ಚೆ ಆರಂಭವಾಗಿದೆ. ಜೊತೆಗೆ ಪ್ರಬಲವಾದ ಕಾರ್ಯಕರ್ತರ ಪಡೆಯಿರುವ ಅಭ್ಯರ್ಥಿ ಕೂಡಾ ಕಾಂಗ್ರೆಸ್‌ಗೆ ಬೇಕಾಗಿದೆ.
ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಉಡುಪಿ ಕ್ಷೇತ್ರದ ರಾಜಕೀಯ ಚಿತ್ರಣ ಯಾವ ಸ್ವರೂಪ ಪಡೆದುಕೊಳ್ಳಬಹುದು ಎಂಬುದನ್ನು ಕಾದುನೋಡಬೇಕಾಗಿದೆ. ಜೊತೆಗೆ ಕಾಂಗ್ರೆಸ್ ಉಡುಪಿ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ