ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಶಾಸಕ ರಘುಪತಿ ಭಟ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುಳಿವು ಕೊಟ್ಟಿದ್ದಾರೆ.
ಉಡುಪಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ರಘುಪತಿ ಭಟ್ ಅವರ ಬೆಂಬಲಿಗರು ಸಭೆ ನಡೆಸಿದ್ದು, ಬೆಂಬಲಿಗರ ಒತ್ತಾಯಕ್ಕೆ ರಘುಪತಿ ಭಟ್ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ..
ಪೆರಂಪಳ್ಳಿಯ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಆದರೆ ಪಕ್ಷ ನಡೆಸಿಕೊಂಡ ರೀತಿ ಬೇಸರ ತಂದಿದೆ ಎಂದು ಉಡುಪಿ ಕ್ಷೇತ್ರದ ಟಿಕೆಟ್ ತಪ್ಪಿದ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಡುವ ಪ್ರಶ್ನೆಯೇ ಇಲ್ಲ. ಯಾಕೆ ಹೀಗಾಯಿತು ಎಂಬುದು ತುಂಬ ಬೇಸರ ತಂದಿದೆ. ನಾನು ಬೆಳೆಸಿದ ಹುಡುಗ ಇಂದು ಅಭ್ಯರ್ಥಿಯಾಗಿದ್ದು, ಅವರಿಗೆ ಶುಭಾಶಯ ಕೋರುತ್ತೇನೆ. ಅಭ್ಯರ್ಥಿ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಉಡುಪಿಯಲ್ಲಿ ಪಾರ್ಟಿ ಕಟ್ಟಿದ್ದೇನೆ ಮತ್ತು ಬಿಜೆಪಿಯಿಂದ ಇಲ್ಲಿ ಯಾರು ನಿಂತರೂ ಗೆಲ್ಲಲಿದ್ದಾರೆ ಅಂತಹ ಸ್ಥಿತಿ ನಿರ್ಮಾಣ ಮಾಡಿದ್ದೇನೆ. ಪಕ್ಷಕ್ಕೆ ಈಗ ನನ್ನ ಅವಶ್ಯಕತೆ ಇಲ್ಲ ಎಂಬುದು ತೋರಿಸುತ್ತಿದ್ದಾರೆ. ಅಮಿತ್ ಶಾ ಬೇಡ, ರಾಜ್ಯ ನಾಯಕರು ಅಥವಾ ಜಿಲ್ಲಾಧ್ಯಕ್ಷರು ಕರೆ ಮಾಡದೇ ಇರುವುದು ಬೇಸರ ತಂದಿದೆ ಎಂದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ