ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಫಾಲ್ಸ್ ನಲ್ಲಿ ಸ್ನಾನಕ್ಕಿಳಿದ ವೇಳೆ ನೀರುಪಾಲಾದ ಕಾಲೇಜು ವಿದ್ಯಾರ್ಥಿಯ ಮೃತದೇಹ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.ಐ ಕುಮಾರ ಶೆಟ್ಟಿ ಎಂಬವರ ಪುತ್ರ ಚಿರಾಂತ್ ಶೆಟ್ಟಿ(20) ನೀರುಪಾಲಾಗಿ ಮೃತಪಟ್ಟ ಯುವಕ.
ಗೆಳೆಯರೊಂದಿಗೆ ಶುಕ್ರವಾರ ಸಂಜೆ ಕೊಸಳ್ಳಿ ಫಾಲ್ಸ್ ಗೆ ಬಂದಿದ್ದ ಇವರು ನೀರಿಗಿಳಿದ ವೇಳೆ ಮುಳುಗಿ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟದ ಬಳಿಕ ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಜೊತೆಗೆ ಏವಿಯೇಷನ್ ಕೋರ್ಸ್ ಕಲಿಯುತ್ತಿದ್ದ ಚಿರಾಂತ್ ಶೆಟ್ಟಿ ಪಿಜಿಯಲ್ಲಿ ಉಳಿದುಕೊಂಡಿದ್ದರು. ಎ.7ರಂದು ಗುಡ್ ಫ್ರೈಡೇ ಪ್ರಯುಕ್ತ ಕಾಲೇಜಿಗೆ ರಜೆ ಇದ್ದ ಕಾರಣ ಚಿರಾಂತ್ ತನ್ನ ಸಹಪಾಠಿ ಮಿತ್ರರಾದ ಬೈಂದೂರಿನ ಕಿರ್ತನ್ ದೇವಾಡಿಗ (20), ಅಕ್ಷಯ್ ಆಚಾರ್ (20) ಎಂಬವರ ಮನೆಗೆ ತನ್ನ ಇನ್ನೂ ಮೂವರು ಗೆಳೆಯರೊಂದಿಗೆ ಗುರುವಾರ ರಾತ್ರಿ ತೆರಳಿದ್ದರು. ಅಕ್ಷಯ್ ಆಚಾರ್ ಮನೆಯಲ್ಲಿ ಉಳಿದುಕೊಂಡಿದ್ದ ಇವರು ಶುಕ್ರವಾರ ಅಪರಾಹ್ನ 3:30ರ ಸುಮಾರಿಗೆ ಕೊಸಳ್ಳಿ ಪಾಲ್ಸ್ ಗೆ ತೆರಳಿದ್ದರು. ಈ ವೇಳೆ ಈಜು ಬರುತ್ತಿದ್ದ ಚಿರಾಂತ್ ಶೆಟ್ಟಿ ಮಾತ್ರ ನೀರಿಗಿಳಿದಿದ್ದು, ಅವರು ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದರು ಎಂದು ಹೇಳಲಾಗಿದೆ. ತೀವ್ರ ಹುಡುಕಾಟದ ಬಳಿಕ ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ