ನವದೆಹಲಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ನಾಳೆ ದೇಶಾದ್ಯಂತ ಸಾರ್ವಜನಿಕ ಬ್ಯಾಂಕುಗಳ ಮುಷ್ಕರಕ್ಕೆ ಕರೆ ನೀಡಿದೆ. ನೌಕರಿ ಕಡಿತ, ಪದಾಧಿಕಾರಿಗಳ ವಿರುದ್ಧ ಉದ್ದೇಶಪೂರ್ವಕ ಕ್ರಮ ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಶನಿವಾರ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಅಧಿಕಾರಿಗಳ ಮಟ್ಟದ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗುವುದಿಲ್ಲವಾದರೂ ನಗದು ಠೇವಣಿ ಇರಿಸುವಿಕೆ, ವಿತ್ಡ್ರಾ, ಚೆಕ್ ಕ್ಲಿಯರೆನ್ಸ್, ಎಟಿಎಂ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಬ್ಯಾಂಕ್ ಆಫ್ ಬರೋಡ, ಪಂಜಾಬ್ & ಸಿಂಧ್ ಬ್ಯಾಂಕ್ ಪ್ರಕಟಣೆಯನ್ನು ಹೊರಡಿಸುವ ಮೂಲಕ ಈಗಾಗೇ ಗ್ರಾಹಕರಿಗೆ ಸಂದೇಶ ಕಳುಹಿಸಿವೆ. ಬ್ಯಾಂಕ್ನ ಹಲವು ಸಿಬ್ಬಂದಿ ಮುಷ್ಕರದಲ್ಲಿ ಬಾಗಿಯಾಗುವ ಸಾಧ್ಯತೆ ಇರುವುದರಿಂದ ಸಾಮಾನ್ಯ ಕಾರ್ಯನಿರ್ವಹಣೆಗೆ ತೊಡಕಾಗಬಹುದು. ಹೀಗಾಗಿ ಬ್ಯಾಂಕಿಂಗ್ ವಹಿವಾಟುಗಳನ್ನು ವಾರಾಂತ್ಯಕ್ಕೆ ಬಾಕಿ ಇಡದೆ ಇಂದೇ ಮುಗಿಸುವಂತೆ ಈ ಬ್ಯಾಂಕ್ಗಳು ಗ್ರಾಹಕರಲ್ಲಿ ಮನವಿ ಮಾಡಿವೆ.
ಗ್ರಾಹಕರ ಖಾಸಗಿತನ ಪಣಕ್ಕಿಟ್ಟು ಸಾವಿರಾರು ಉದ್ಯೋಗಗಳನ್ನು ಬ್ಯಾಂಕುಗಳು ಹೊರಗುತ್ತಿಗೆ ನೀಡುತ್ತಿವೆ. ಸರ್ಕಾರಿ ನೇಮಕಾತಿ ಕಡಿಮೆ ಮಾಡಿವೆ. ಪದಾಧಿಕಾರಿಗಳ ವಿರುದ್ಧ ಉದ್ದೇಶಪೂರ್ವಕವಾಗಿ ಕ್ರಮಕೈಗೊಳ್ಳುತ್ತಿವೆ. ಇದನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಸಿ.ಹೆಚ್. ವೆಂಕಟಾಚಲಂ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ